ಗುಜರಾತ್ ಮಾಡೆಲ್ ಹಿಂದಿರುವ ಕ್ರೂರ ಸತ್ಯವನ್ನು ಬಹಿರಂಗಪಡಿಸುತ್ತೇನೆ: ಹಾರ್ದಿಕ್ ವಾರ್ನಿಂಗ್

ಶನಿವಾರ, 10 ಅಕ್ಟೋಬರ್ 2015 (18:06 IST)
ದೇಶದಲ್ಲಿ ಗುಜರಾತ್ ಅಭಿವೃದ್ಧಿ ಮಾಡೆಲ್ ಬಗ್ಗೆ ತುಂಬಾ ಚರ್ಚೆಯಾಗುತ್ತಿರುವುದನ್ನು ಪ್ರಶ್ನಿಸಿದ ಪಟೇಲ್ ಮೀಸಲಾತಿ ಹೋರಾಟ ಸಮಿತಿ ಮುಖ್ಯಸ್ಥ ಹಾರ್ದಿಕ್ ಪಟೇಲ್, ಗುಜರಾತ್ ಮಾಡೆಲ್ ಹಿಂದಿರುವ ವಾಸ್ತವತೆಯನ್ನು ಬಹಿರಂಗಪಡಿಸುತ್ತೇನೆ ಎಂದು ಎಚ್ಚರಿಸಿದ್ದಾರೆ.
 
ಪಟೇಲ್ ಮೀಸಲಾತಿ ಹೋರಾಟ ಸಮಿತಿಯ ಮುಂದಿನ ಹೋರಾಟದ ರೂಪರೇಷೆಗಳ ಬಗ್ಗೆ ನಡೆದ ಸಭೆಯ ನಂತರ ಮಾತನಾಡಿದ ಹಾರ್ದಿಕ್, ಗುಜರಾತ್ ಅಭಿವೃದ್ಧಿಯ ಮಾದರಿಯಾಗಿರುತ್ತಿದ್ದರೆ ರೈತರು ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಇಂತಹ ಅನೇಕ ಉದಾಹರಣೆಗಳಿವೆ ಎಂದು ವಾಗ್ದಾಳಿ ನಡೆಸಿದ್ದಾರೆ.
 
ರಾಜ್ಯದಲ್ಲಿ ರೈತರು ಸಂತೋಷವಾಗಿದ್ದಾರೆ ಎಂದು ಗುಜರಾತ್ ಸರಕಾರ ಹೇಳುತ್ತಿದೆ. ಹಾಗಾದಲ್ಲಿ, ಕಳೆದ ಒಂದು ವಾರದಲ್ಲಿಯೇ ಇಬ್ಬರು ರೈತರು ಯಾಕೆ ಆತ್ಮಹತ್ಯೆಗೆ ಶರಣಾಗುತ್ತಿದ್ದರು. ಉದ್ಯೋಗ ನೇಮಕಾತಿ ಅವ್ಯವಹಾರದಲ್ಲಿ ಭಾಗಿಯಾದವರ ಬಗ್ಗೆ ಸರಕಾರ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಪೊಲೀಸರು ಮುಗ್ದ ಮಹಿಳೆಯರ ಮೇಲೆ ಹಲ್ಲೆ ಮಾಡಿ ಯಾಕೆ ಜೈಲಿಗೆ ಕಳುಹಿಸುತ್ತಿದ್ದಾರೆ? ಇದು ಗುಜರಾತ್ ಮಾಡೆಲ್‌ ಆಗಿದೆಯೇ ಎಂದು ಪ್ರಶ್ನಿಸಿದ್ದಾರೆ. 
 
ಪಟೇಲ್ ಸಮುದಾಯದ ಜನರ ಮೇಲೆ ಪೊಲೀಸರು ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಗುಜರಾತ್ ಸರಕಾರ ತನ್ನ ಲಾಭಕ್ಕಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ ತಡೆಗೆ ಸರಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಇದು ಗುಜರಾತ್ ಮಾಡೆಲ್? ಇಂತಹ ಗುಜರಾತ್ ಮಾಡೆಲ್ ದೇಶದ ತುಂಬಾ ಮೋದಿ ಜಾರಿಗೊಳಿಸಲಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.  
 
ಪಟಿದಾರ್ ಅನಾಮತ್ ಅಂದೋಲನಾ ಸಮಿತಿಯ ಮುಖ್ಯಸ್ಥರಾದ 22 ವರ್ಷ ವಯಸ್ಸಿನ ಹಾರ್ದಿಕ್ ಪಟೇಲ್ ಮಾತನಾಡಿ, ಗುಜರಾತ್ ಮಾಡೆಲ್ ಎನ್ನುವುದು ಸುಳ್ಳು. ಇದರ ಹಿಂದಿರುವ ವಾಸ್ತವ ಸಂಗತಿಯನ್ನು ಬಹಿರಂಗಪಡಿಸುವುದಾಗಿ ಹೇಳಿದ್ದಾರೆ.
 
ಗುಜರಾತ್ ಮಾಡೆಲ್ ಬಗ್ಗೆ ಅನಗತ್ಯವಾಗಿ ಬಿಜೆಪಿ ನಾಯಕರು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಇದು ನಿಜಕ್ಕೂ ಸತ್ಯಕ್ಕೆ ದೂರವಾದ ಸಂಗತಿ ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ