ದಾವೂದ್ ಇಬ್ರಾಹಿಂಗೆ 1000 ಕೋಟಿ ನೀಡಿದ್ದ ಲಲಿತ್ ಮೋದಿ!

ಸೋಮವಾರ, 6 ಜುಲೈ 2015 (11:15 IST)
ಲಂಡನ್‌ನಲ್ಲಿ ಕುಳಿತುಕೊಂಡು ಭಾರತದ ರಾಜಕೀಯದಲ್ಲಿ  ಕೋಲಾಹಲವನ್ನು ಎಬ್ಬಿಸುತ್ತಿರುವ ಲಲಿತ್ ಮೋದಿ ಕುರಿತ ಸ್ಪೋಟಕ ಸತ್ಯವೊಂದನ್ನು ದಾವೂದ್ ಇಬ್ರಾಹಿಂ ಬಲಗೈ ಬಂಟ ಛೋಟಾ ಶಕೀಲ್ ಬಹಿರಂಗ ಪಡಿಸಿದ್ದಾನೆ. ಆತನನ್ನು ಕೊಲ್ಲಲು ನಾವು ಸಂಚು ನಡೆಸಿದ್ದೆವು .ಆದರೆ ಕೊಲೆ ಯತ್ನ ಸ್ವಲ್ಪದರಲ್ಲೆ ವಿಫಲವಾಯಿತು ಎಂದು ಶಕೀಲ್ ತಿಳಿಸಿದ್ದಾನೆ. 
 
ಖಾಸಗಿ ಚಾನೆಲ್ ಒಂದರ ಜತೆ ಮಾತನಾಡುತ್ತಿದ್ದ ಶಕೀಲ್, "ಡಿ ಕಂಪನಿ ಜತೆ ಲಲಿತ್ 1000 ಕೊಟ್ಟಿ ಡೀಲ್ ಮಾಡಿಕೊಂಡಿದ್ದರು. ಇದು ಮ್ಯಾಚ್ ಫಿಕ್ಸಿಂಗ್‌ಗೆ ಸಂಬಂಧಿಸಿದ ಡೀಲ್ ಆಗಿರಲಿಲ್ಲ. ಐಪಿಎಲ್‌ಗೆ ಸಂಬಂಧಿಸಿದ್ದಾಗಿದ್ದರೆ ನಾವು ಅವರನ್ನು ಭಾರತದಲ್ಲಿಯೇ ಕೊಲ್ಲುತ್ತಿದ್ದೆವು. ಒಂದು ವ್ಯವಹಾರಕ್ಕೆ ಸಂಬಂಧಿಸಿ ನಮ್ಮ ನಡುವೆ ಒಪ್ಪಂದವಾಗಿತ್ತು. ಆ ಹಣವನ್ನು ನೀಡಲಿಲ್ಲವೆಂಬ ಮೋದಿಯನ್ನು ಕೊಲ್ಲಲು ನಮ್ಮ ಗುಂಪಿನ ವ್ಯಕ್ತಿ ಬ್ಯಾಂಕಾಕ್‌ಗೆ ಹೋಗಿದ್ದ. ಆದರೆ ಆತ ಅಲ್ಲಿಗೆ ತಲುಪಲು ತಡವಾಗಿದ್ದರಿಂದ ಲಲಿತ್‌ ಮೋದಿ ಸ್ವಲ್ಪದರಲ್ಲೇ ಪಾರಾದರು", ಎಂದಿದ್ದಾನೆ. 
 
"ನಂತರ ಮೋದಿ ನಮಗೆ ನೀಡಬೇಕಿದ್ದ ಹಣವನ್ನು ಹಿಂತಿರುಗಿಸಿದರು. ಆ ಬಳಿಕವಷ್ಟೇ ಅವರನ್ನು ಕೊಲ್ಲುವ ಯೋಜನೆಯನ್ನು ಕೈ ಬಿಟ್ಟೆವು. ಮತ್ತೆ ನಾವು ಅವರಿಗೆ ತೊಂದರೆ ನೀಡುವ ಪ್ರಶ್ನೆಯೇ ಈಗ ಉಳಿದಿಲ್ಲ. ಅವರು ಮುಕ್ತವಾಗಿ ಓಡಾಡಿಕೊಂಡಿರಬಹುದು.  ಅವರು ಭಾರತಕ್ಕೆ ಬರಲು ಯಾವ ಅಡ್ಡಿಯೂ ಇಲ್ಲ", ಎಂದು ಛೋಟಾ ಶಕೀಲ್ ಹೇಳಿದ್ದಾನೆ. 
 
" ದಾವೂದ್‌ ಕಂಪನಿಯಿಂದ ಪ್ರಾಣ ಬೆದರಿಕೆ ಇದೆ ಎಂಬ ಕಾರಣವನ್ನು ನೀಡಿ ಲಲಿತ್ ಭಾರತಕ್ಕೆ ವಾಪಸ್ಸಾಗುವುದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಎಲ್ಲರಿಗೂ ದಾವೂದ್  ಹೆಸರು ಬೇಕು. ಒಳ್ಳೆಯದಕ್ಕೂ, ಕೆಟ್ಟದ್ದಕ್ಕೂ, ಕಾನೂನಿನಿಂದ ಪಾರಾಗುವುದಕ್ಕೂ ದಾವೂದ್‌ ಹೆಸರನ್ನು ಬಳಸಲಾಗುತ್ತದೆ. ದಾವೂದ್‌ನಿಂದ ತಮಗೆ ಜೀವ ಬೆದರಿಕೆ ಇದೆ. ಭಾರತದಲ್ಲಿ ನನಗೆ ರಕ್ಷಣೆ ಉಲ್ಲ. ಹೀಗಾಗಿ ನಾನು ದೇಶ ಬಿಟ್ಟು ಇಂಗ್ಲೆಂಡ್‌ಗೆ  ಓಡಿ ಬಂದಿದ್ದೇನೆ ಎಂದು ಲಲಿತ್‌ ಮೋದಿ ಹೇಳಿಕೊಂಡು ಬಂದಿದ್ದಾರೆ. ಆದರೆ ಅವರು ನಮಗೆ ನೀಡಬೇಕಾಗಿರುವುದನ್ನು ನೀಡಿರುವುದರಿಂದ ನಾವು ಅವರ ತಂಟೆಗೆ ಹೋಗುವುದಿಲ್ಲ", ಎಂದು ಛೋಟಾ ಶಕೀಲ್‌ ಸಂದರ್ಶನದಲ್ಲಿ ತಿಳಿಸಿದ್ದಾನೆ.
 
ಛೋಟಾ ಶಕೀಲ್ ಈ ಹೇಳಿಕೆ ಲಲಿತ್ ಮೋದಿ ಮುಂದೆ ಹಲವು ಇಕ್ಕಟ್ಟುಗಳನ್ನು ತಂದಿಟ್ಟಿದೆ.  ಭಾರತ ಸರ್ಕಾರಕ್ಕೆ ಬೇಕಾಗಿರುವ ಆರೋಪಿಯಾಗಿರುವ ಲಲಿತ್ ಮೋದಿಗೆ ಲಂಡನ್ ಸರ್ಕಾರ ದೇಶ ಬಿಟ್ಟು ಹೋಗುವಂತೆ ನಿರ್ದೇಶಿಸಿತ್ತು. ಆದರೆ ತನಗೆ ದಾವೂದ್ ಕಡೆಯಿಂದ ಪ್ರಾಣ ಬೆದರಿಕೆ ಇದೆ ಎಂಬ ಕಾರಣ ನೀಡಿದ್ದರಿಂದ ಕೋರ್ಟ್  ಆತನಿಗೆ ಅಲ್ಲಿಯೇ ವಾಸ್ತವ್ಯ ಹೂಡಲು ಅನುಮತಿ ನೀಡಿತ್ತು. ಆದರೆ ಈಗ ಶಕೀಲ್ ಅವರಿಗೆ ತಮ್ಮಿಂದ ಪ್ರಾಣ ಬೆದರಿಕೆ ಇಲ್ಲವೆಂದು ಸ್ಪಷ್ಟನೆ ನೀಡಿರುವುದು ಮೋದಿಗೆ ಭಾರತಕ್ಕೆ ಬರುವುದನ್ನು ತಪ್ಪಿಸಿಕೊಳ್ಳಲು ಇದ್ದ ಒಂದು ಕಾರಣವನ್ನು ಇಲ್ಲವಾಗಿಸಿದೆ.
 
ಅಲ್ಲದೇ ದೇಶದ್ರೋಹಿ ದಾವೂದ್‌ಗೆ 1,000ಕೋಟಿ ಹಣ ನೀಡಿದ ಆರೋಪವು ಕೂಡ ಅವರನ್ನೀಗ ಸುತ್ತಿಕೊಂಡಿದೆ. 

ವೆಬ್ದುನಿಯಾವನ್ನು ಓದಿ