ಭಾರತದಲ್ಲೊಂದು ಬಾಂಗ್ಲಾ ರಾಜ್ಯ: ಪಶ್ಚಿಮ ಬಂಗಾಳ ಮರುನಾಮಕರಣಕ್ಕೆ ಅಸೆಂಬ್ಲಿ ಅಸ್ತು

ಮಂಗಳವಾರ, 30 ಆಗಸ್ಟ್ 2016 (12:48 IST)
ಪಶ್ಚಿಮ ಬಂಗಾಳ ವಿಧಾನಸಭೆ ಸೋಮವಾರ ರಾಜ್ಯಕ್ಕೆ ಮರುನಾಮಕರಣ ಮಾಡುವ ನಿರ್ಣಯವೊಂದನ್ನು ಅಂಗೀಕರಿಸಿದೆ. ಇದಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಲ್ಲಿಸಿ ವಾರಗಳು ಕಳೆದ ಮೇಲೆ ಇದು ಅನುಮೋದನೆಯಾಗಿದೆ. ಪಶ್ಚಿಮಬಂಗಾಳವನ್ನು ಬೆಂಗಾಳಿ ಭಾಷೆಯಲ್ಲಿ "ಬಾಂಗ್ಲಾ'', ಇಂಗ್ಲಿಷಿನಲ್ಲಿ ಬೆಂಗಾಳ್ ಮತ್ತು ಹಿಂದಿಯಲ್ಲಿ ಬಂಗಾಳ್ ಎಂದು ಕರೆಯುವ ನಿರ್ಣಯಕ್ಕೆ ವಿಧಾನಸಭೆ ಅಸ್ತು ಎಂದಿದೆ.
 
ಪಶ್ಚಿಮ ಬಂಗಾಳ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ನೀಡಲಾಯಿತು. ರಾಜ್ಯಕ್ಕೆ ಪುನರ್ನಾಮಕರಣ ಮಾಡುವ ಕುರಿತು ಚರ್ಚೆಗೆ ಆಗಸ್ಟ್ 26ರಂದು ಅಧಿವೇಶನ ಕರೆಯಲಾಗಿತ್ತು.
 
ನಾವು ಬಾಂಗ್ಲಾ ಮತ್ತು ಬೆಂಗಾಳ್ ನಾಮಕರಣದ ನಿರ್ಧಾರ ಕೈಗೊಂಡಿದ್ದೇವೆ. ಅಸೆಂಬ್ಲಿಯ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸುವಂತೆ ಕೇಂದ್ರಕ್ಕೆ ಕೇಳಿದ್ದೇವೆ. ಸಂಸತ್ತಿನ ಅಧಿವೇಶನದಲ್ಲಿ ಇದು ಅಂಗೀಕಾರವಾಗಲು ನಾವು ಬಯಸುತ್ತೇವೆ ಎಂದು ಅಸೆಂಬ್ಲಿಯಲ್ಲಿ ನಿರ್ಣಯ ಅಂಗೀಕಾರವಾದ ಬಳಿಕ ಬ್ಯಾನರ್ಜಿ ತಿಳಿಸಿದರು. 
 
ಆದರೆ ವಿಧಾನಸಭೆ ನಿರ್ಣಯವನ್ನು ಸಂಸತ್ತಿನಲ್ಲಿ ಅನುಮೋದಿಸುವುದಕ್ಕೆ ಸಮಸ್ಯೆಯಾಗಿ ಪರಿಣಮಿಸಬಹುದು. ಈಗಾಗಲೇ ಬಾಂಗ್ಲಾ ದೇಶ ಇರುವಾಗ ಭಾರತದ ರಾಜ್ಯವೊಂದಕ್ಕೆ ಬಾಂಗ್ಲಾ ಎಂದು ಹೆಸರಿಸುವ ಔಚಿತ್ಯವನ್ನು ಸದಸ್ಯರು ಪ್ರಶ್ನಿಸಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ