ಜೆಎನ್‌ಯು ವಿದ್ಯಾರ್ಥಿನಿಗೆ ಬೆದರಿಕೆ ಒಡ್ಡಿದ್ದನಂತೆ ಕನ್ಹಯ್ಯಾ;ಯಾಕೆ ಗೊತ್ತಾ?

ಗುರುವಾರ, 10 ಮಾರ್ಚ್ 2016 (12:19 IST)
ದೇಶದ್ರೋಹ ಘೋಷಣೆ ಕೂಗಿದ ಆರೋಪದಡಿ ಬಂಧಿಸಲ್ಪಟ್ಟು ಸದ್ಯ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಯೂನಿಯನ್ ಲೀಡರ್ ಕನ್ಹಯ್ಯ ಕುಮಾರ್ ಅವರ ಮೇಲೆ ಮತ್ತೊಂದು ಆರೋಪ ಕೇಳಿ ಬಂದಿದೆ. ಮಾಜಿ ವಿದ್ಯಾರ್ಥಿನಿ ಜತೆ ಅನುಚಿತವಾಗಿ ನಡೆದುಕೊಂಡಿದ್ದಕ್ಕೆ 2015ರಲ್ಲಿ ವಿವಿ ದಂಡ ವಿಧಿಸಿತ್ತು ಎಂದು ತಿಳಿದು ಬಂದಿದೆ. 
 
ಜೂನ್ 10, 2015ರಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಯೋರ್ವರು ವಿವಿ ಕ್ಯಾಂಪಸ್‌ನಲ್ಲಿ ಮೂತ್ರ ಮಾಡಬೇಡ. ಶೌಚಾಲಯವನ್ನು ಬಳಸು ಎಂದು ಸಲಹೆ ನೀಡಿದ್ದಕ್ಕೆ ತನ್ನ ತಪ್ಪಿಗೆ ನಾಚಿಕೆ ಪಟ್ಟು ಕೊಳ್ಳುವ ಬದಲು ಕನ್ಹಯ್ಯ ಆಕೆಯ ವಿರುದ್ಧ ಕೆಟ್ಟ ಭಾಷೆ ಪ್ರಯೋಗಿಸಿದ್ದ, 'ಸೈಕೋ ಮೆಂಟಲ್' ಎಂದು ಜರಿದಿದ್ದ ಎಂದು ತಿಳಿದು ಬಂದಿದೆ. 
 
ಅಷ್ಟಕ್ಕೆ ನಿಲ್ಲದೆ ನೀನು ಏನು ಬೇಕಾದರೂ ಮಾಡಿಕೋ. ನಿನ್ನನ್ನು ಆಮೇಲೆ ವಿಚಾರಿಸಿಕೊಳ್ಳುತ್ತೇನೆ ಎಂದು ಕನ್ಹಯ್ಯ ಬೆದರಿಕೆ ಸಹ ಒಡ್ಡಿದ್ದರಿಂದ ನೊಂದ ವಿದ್ಯಾರ್ಥಿನಿ ಜೆಎನ್‌ಯು ಆಡಲಿತ ಮಂಡಳಿಗೆ ಈ ಕುರಿತು ದೂರು ದಾಖಲಿಸಿದ್ದಳು. ಆತನ ವಿರುದ್ಧ ಕಠಿಣ ಕ್ರಮಕ್ಕೆ ಆಡಳಿತ ಮಂಡಳಿ ಶಿಫಾರಸ್ಸು ಮಾಡಿತ್ತು. ಆದರೆ ಆತನ ಭವಿಷ್ಯಕ್ಕೆ ಕಪ್ಪುಚುಕ್ಕಿಯಾಗಬಹುದೆಂಬ ಕಾರಣಕ್ಕೆ ಉಪಕುಲಪತಿ ಅದನ್ನು ತಡೆದಿದ್ದರು. ಹೀಗಾಗಿ ಆತನಿಗೆ 3,000 ರೂಪಾಯಿ ದಂಡವನ್ನು ವಿಧಿಸಲಾಗಿತ್ತು.
 
ನೀವು ನಮ್ಮನ್ನು ಎಷ್ಟು ತಡೆದರೂ ನಾವು ಮಾತನ್ನಾಡುತ್ತೇವೆ. ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ನಾವು ಹೋರಾಡುತ್ತೇವೆ. ಎಎಫ್ಎಸ್‌ಪಿಎ ವಿರುದ್ಧ ನಾವು ತೊಡೆ ತಟ್ಟುತ್ತೇವೆ. ಕಾಶ್ಮೀರಿ ಮಹಿಳೆಯರ ಮೇಲೆ ಸೈನಿಕರು ಅತ್ಯಾಚಾರವೆಸಗುತ್ತಿದ್ದಾರೆ. ಅದರ ವಿರುದ್ಧ ನಾವು ಧ್ವನಿ ಎತ್ತುತ್ತೇವೆ ಎಂದು ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಕನ್ಹಯ್ಯಾ ಘೋಷಿಸಿದ ಎರಡು ದಿನಗಳ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. 

ವೆಬ್ದುನಿಯಾವನ್ನು ಓದಿ