ಅರುಣ್ ಜೇಟ್ಲಿ ಮಂಡಿಸುವ ಬಜೆಟ್‌ನಲ್ಲಿ ಏನೇನಿರಬಹುದು ?

ಶನಿವಾರ, 28 ಫೆಬ್ರವರಿ 2015 (09:45 IST)
ಇಂದು 2015ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್‌ನ್ನು ಮಂಡಿಸಲು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸಿದ್ಧರಾಗಿದ್ದು, ಇದು ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಸಂಪೂರ್ಣ ಪ್ರಮಾಣದ ಬಜೆಟ್ ಆಗಿದೆ. 
 
ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಸಚಿವ ಜೇಟ್ಲಿ ಅವರು ಈಗಾಗಲೇ ದೆಹಲಿಯ ನಾರ್ಥ್ ಬ್ಲಾಕ್‌ನಲ್ಲಿರುವ ಹಣಕಾಸು ಸಚಿವಾಲಯಕ್ಕೆ ಆಗಮಿಸಿದ್ದಾರೆ. ಜೇಟ್ಲಿ ಎರಡನೇ ಬಾರಿಗೆ ಆರ್ಥಿಕ ಬಜೆಟ್ಟನ್ನು ಮಂಡಿಸುತ್ತಿದ್ದು, 11 ಗಂಟೆಗೆ ಬಜೆಟ್ ಮಂಡಿಸಲಿದ್ದಾರೆ. 
 
ಈಗಾಗಲೇ ಆರ್ಥಿಕ ಸಬಲೀಕರಣದತ್ತ ಮೊದಲ ಹೆಜ್ಜೆ ಇಡುತ್ತಿರುವ ಕೇಂದ್ರ ಸರ್ಕಾರ, ಅನೇಕ ಸಬ್ಸಿಡಿಗಳಿಗೆ ಬ್ರೇಕ್ ಹಾಕಲು ನಿರ್ಧರಿಸಿದ್ದು, ಕುಟುಂಬದ ಆದಾಯವು ವಾರ್ಷಿಕವಾಗಿ 10 ಲಕ್ಷ ಮೀರಿದ್ದರೆ ಅಂತಹ ಕುಟುಂಬಗಳಿಗೆ ಕೊಡಲಾಗುವ ಎಲ್‌ಪಿಜಿ ಸಬ್ಸಿಡಿಗೆ ಮೋದಿ ಸರ್ಕಾರ ಬ್ರೇಕ್ ಹಾಕಲಿದೆ. ಈ ಹಿಂದೆ ಪ್ರತಿಕ್ರಿಯಿಸಿದ್ದ ಪ್ರಧಾನಿ ಮೋದಿ, ಸಬ್ಸಿಡಿ ಯಾರಿಗೆ ಸಿಗಬೇಕೊ ಅವರಿಗೆ ಮಾತ್ರ ಸಿಗಬೇಕು ಎಂದು ಮೋದಿ ಈ ಹಿಂದೆಯೇ ಹೇಳಿದ್ದರು.
 
ಸರ್ಕಾರದ ಈ ಬಜೆಟ್ ನ ಮುಖ್ಯಾಂಶಗಳೆಂದರೆ ವಿದೇಶಗಳಿಂದ ಆಮದು ಮಾಡಿಕೊಳ್ಳುವ ಸ್ವದೇಶಿ ಕಂಪನಿಗಳಿಗೆ ತೆರಿಗೆಯಲ್ಲಿ ಹೆಚ್ಚು ಮಾಡುವ ಮೂಲಕ ಆಮದು ಕಡಿತಗೊಳಿಸುವುದು, ಗೃಹ ನಿರ್ಮಾಣ ಹಾಗೂ ಇತರೆ ಸಾಲ ಸೌಲಭ್ಯಗಳನ್ನು ಕಡಿಮೆ ಬಡ್ಡಿದರದಲ್ಲಿ ಒದಗಿಸುವುದು, ಉದ್ಯಮ ವಲಯ ವಿಸ್ತರಿಸಿ ಉದ್ಯೋಗ ಹೆಚ್ಚಳಕ್ಕೆ ಆದ್ಯತೆ ನೀಡುವುದೂ ಸೇರಿದಂತೆ ಇನ್ನಿತರೆ ವಲಯಗಳಿಗೆ ಪೂರಕವಾದ ಬಜೆಟ್ ಮಂಡಿಸಿ, ಈ ಮೂಲಕ ಆರ್ಥಿಕ ಸುಧಾರಣೆಗೆ ಮೋದಿ ಸರ್ಕಾರ ಮುಂದಾಗಿದೆ.
 
ಮೂಲ ಸೌಕರ್ಯ ಅಭಿವೃದ್ಧಿಯಲ್ಲಿ ಖಾಸಗಿ ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡಲು ಸರ್ಕಾರ ನಿರ್ಧರಿಸಿದ್ದು, ಕ್ಲೀನ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ್ ಅಭಿಯಾನ, ಗಂಗಾ ಶುದ್ಧೀಕರಣ ಯೋಜನೆ ಸೇರಿದಂತೆ ಇನ್ನಿತರೆ ಯೋಜನೆಗಳ ಯಶಸ್ವಿಗೆ ಆದ್ಯತೆ ನೀಡಲಿದೆ. ಅಂತೆಯೇ ಆಹಾರ ಭದ್ರೆತೆಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎನ್ನಲಾಗಿದೆ. 
 
ಇನ್ನು ಹಿಂದಿನ ಯುಪಿಎ ಸರ್ಕಾರ ಬಡತನ ನಿರ್ಮೂಲನೆಗಾಗಿ ಜಾರಿಗೆ ತಂದಿದ್ದ ಮನ್‌ರೇಗಾ, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಇತರೆ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲು ಸರ್ಕಾರ ತೀರ್ಮಾನಿಸಿದೆ. ಅಲ್ಲದೆ ಪ್ರಧಾನಿ ಮೋದಿ ಈ ಬಗ್ಗೆ ನಿನ್ನೆ ನಡೆದ ಅಧಿವೇಶನದಲ್ಲಿಯೂ ತಿಳಿಸಿದ್ದರು.  
 
ಪ್ರಮುಖವಾಗಿ ಬಜೆಟ್‌ನಲ್ಲಿ ರೈತರ ಉತ್ಪಾದಕ ವಸ್ತುಗಳ ಮೇಲೆ ಕಡಿಮೆ ತೆರಿಗೆ, ಆಮದಿಗೆ ಕಡಿವಾಣ, ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಉದ್ಯೋಗ ಸೃಷ್ಟಿ ಸೇರಿದಂತೆ ಇತರೆ ವಲಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎನ್ನಲಾಗುತ್ತಿದೆ. 
 
ಬಜೆಟ್ ಹಿನ್ನೆಲೆಯಲ್ಲಿ ಬಜೆಟ್‌ಗೂ ಮುನ್ನ ಪ್ರಧಾನಿ ಮೋದಿ ಇಂದು ಸಚಿವ ಸಂಪುಟ ಸಭೆ ಕರೆದಿದ್ದು, ಸಂಸತ್ ಭವನದಲ್ಲಿ ಸಭೆ ನಡೆಯುತ್ತಿದೆ. ಆದಾಯ ತೆರಿಗೆ ವಿನಾಯ್ತಿಯಲ್ಲಿ ಹೆಚ್ಚಳ ಮಾಡಲು ಸಭೆಯಲ್ಲಿ ಚರ್ಚಿಸಲಾಗುತ್ತಿದ್ದು, ವಿನಾಯ್ತಿ ಮಿತಿಯನ್ನು 1.5 ಲಕ್ಷದಿಂದ ಹೆಚ್ಚಾಗಿ ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೆ ಸದನದಲ್ಲಿ ಬಜೆಟ್‌ಗೆ ಅನುಮೋದನೆ ನೀಡುವಂತೆ ತಮ್ಮ ಸಚಿವ ಹಾಗೂ ಸಂಸದರಿಗೆ ಕಿವಿ ಮಾತನ್ನು ಹೇಳಿದ್ದಾರೆ ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ