ದೆಹಲಿ ಮೃಗಾಲಯದಲ್ಲಿ ಬಿಳಿ ಹುಲಿಯ ದಾಳಿಗೆ ಬಾಲಕ ಬಲಿ

ಮಂಗಳವಾರ, 23 ಸೆಪ್ಟಂಬರ್ 2014 (15:58 IST)
ದೆಹಲಿ ಮೃಗಾಲಯದಲ್ಲಿ ಬಿಳಿಯ ಹುಲಿಯೊಂದು 17 ವರ್ಷದ ಬಾಲಕನನ್ನು ಕೊಂದುಹಾಕಿದ ಭಯಾನಕ ಘಟನೆ  ಇಂದು ವರದಿಯಾಗಿದೆ. ಮೃಗಾಲಯದಲ್ಲಿ ಮಧ್ಯಾಹ್ನ ಹುಲಿಯನ್ನು ಇರಿಸಿದ್ದ ಆವರಣದ  ಬೇಲಿಯ ಮೇಲೆ ಹತ್ತಿ ಹುಲಿಯ ಚಿತ್ರವನ್ನು ಕ್ಲಿಕ್ಕಿಸುತ್ತಿದ್ದ 12 ನೇ ತರಗತಿಯ ಬಾಲಕ ಇದ್ದಕ್ಕಿದ್ದಂತೆ ಹುಲಿಯನ್ನು ಇಟ್ಟಿದ್ದ ಆವರಣದೊಳಕ್ಕೆ ಬಿದ್ದ. ಹುಲಿ ಸುಮಾರು 10 ನಿಮಿಷಗಳವರೆಗೆ ಬಾಲಕನನ್ನು  ದಿಟ್ಟಿಸಿ ನೋಡುತ್ತಿತ್ತು.

ಆದರೆ ಅಲ್ಲಿದ್ದ ಕೆಲವು ಪ್ರವಾಸಿಗಳು ಹುಲಿಯತ್ತ ಕಲ್ಲುತೂರಿದ್ದರಿಂದ ಹುಲಿಯ ಕ್ರೌರ್ಯ ಕೆರಳಿತ್ತು. ರೋಷಾವೇಷಗೊಂಡ ಹುಲಿ ದಿಢೀರನೇ ಹಾರಿ ಬಾಲಕನ  ಕುತ್ತಿಗೆಗೆ ಬಾಯಿ ಹಾಕಿ ಎಳೆದುಕೊಂಡು ಹೋಗಿ ಕೊಂದು ಹಾಕಿತು ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ.

 ಬಾಲಕನ ಕುತ್ತಿಗೆ ಮತ್ತಿತರ ಭಾಗಗಳಲ್ಲಿ ಹುಲಿ ಕಚ್ಚಿದ್ದರಿಂದ  ನೋವಿನಿಂದ ಸುಮಾರು ಅರ್ಧಗಂಟೆವರೆಗೆ ಚೀರುತ್ತಿದ್ದ ಬಾಲಕನ ಧ್ವನಿ ಕ್ರಮೇಣ ಕ್ಷೀಣಿಸಿ ಮೃಗಾಲಯದ ಸಿಬ್ಬಂದಿ ಬಾಲಕನ ನೆರವಿಗೆ ಬರುವಷ್ಟರಲ್ಲಿ ಬಾಲಕನ ಪ್ರಾಣಪಕ್ಷಿ ಹಾರಿಹೋಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ