ತಮಿಳುನಾಡಿಗೆ ಮುಂದಿನ ಮುಖ್ಯಮಂತ್ರಿ ಯಾರು?

ಮಂಗಳವಾರ, 14 ಫೆಬ್ರವರಿ 2017 (11:46 IST)
ಚೆನ್ನೈ: ತಮಿಳುನಾಡು ಈಗ ಸಂಪೂರ್ಣ ಅತಂತ್ರ ಸ್ಥಿತಿಗೆ ತಲುಪಿದೆ. ಶಶಿಕಲಾ ಮತ್ತು ಪನೀರ್ ಸೆಲ್ವಂ ನಡುವೆ ನಡೆಯುತ್ತಿದ್ದ ಕುರ್ಚಿ ಗುದ್ದಾಟ ಸುಪ್ರೀಂ ಕೋರ್ಟ್ ತೀರ್ಪಿನಿಂದ ಇನ್ನೊಂದು ಹಂತಕ್ಕೆ ತಲುಪಿದೆ.

 
ನ್ಯಾಯಾಲಯದ ತೀರ್ಪಿನಿಂದಾಗಿ ಅತೀ ಹೆಚ್ಚು ಬೆಂಬಲಿಗ ಶಾಸಕರನ್ನು ಹೊಂದಿದ್ದ ಶಶಿಕಲಾ ನಟರಾಜನ್ ಮುಖ್ಯಮಂತ್ರಿಯಾಗುವಂತಿಲ್ಲ. ಅತ್ತ ಪನೀರ್ ಸೆಲ್ವಂ ಈಗಾಗಲೇ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದು, ಹಂಗಾಮಿಯಾಗಿದ್ದಾರೆ.

ಹಾಗಾದರೆ ತಮಿಳುನಾಡಿಗೆ ಹೊಸ ನಾಯಕ ಯಾರು ಎಂಬ ಪ್ರಶ್ನೆ ಉದ್ಭವವಾಗಿದೆ. ಒಂದು ವೇಳೆ ಗೋಲ್ಡನ್ ಬೇ ರೆಸಾರ್ಟ್ ನಿಂದ ಹೊರ ಬಂದ ನಂತರ ಶಾಸಕರು ಶಶಿಕಲಾ ರನ್ನು ಬಿಟ್ಟು ಪನೀರ್ ಸೆಲ್ವಂ ಕಡೆಗೆ ವಾಲುವ ಸಾಧ್ಯತೆಯೂ ಇದೆ. ಹೀಗಾದರೆ ಪನೀರ್ ಸೆಲ್ವಂ ಬಣದಿಂದ ಯಾರಾದರೂ ಮುಖ್ಯಮಂತ್ರಿಯಾಗಲೂ ಬಹುದು. ಅದಕ್ಕಿಂತ ಮೊದಲೇ ಶಶಿಕಲಾ ನಟರಾಜನ್ ನ್ಯಾಯಾಲಯದ ತೀರ್ಪಿನ ಬೆನ್ನಲ್ಲೇ ಬೆಂಬಲಿಗರೊಂದಿಗೆ ಚರ್ಚಿಸುತ್ತಿದ್ದು, ತಮ್ಮ ಉತ್ತರಾಧಿಕಾರಿಯನ್ನು ಆಯ್ಕೆ ನಡೆಸಲೂ ಬಹುದು.

ಒಂದು ವೇಳೆ ಪನೀರ್ ಸೆಲ್ವಂ ಬಂಡಾಯ ಏಳದೇ ಹೋಗಿದ್ದರೆ, ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಿದ್ದರು. ಇದೀಗ  ಶಶಿಕಲಾ ಪಾಳಯದಲ್ಲಿರುವ ಶಾಸಕರು ಪನೀರ್ ಸೆಲ್ವಂಗೆ ಬೆಂಬಲ ನೀಡುತ್ತಾರಾ? ಶಶಿಕಲಾ ಬಣದಿಂದಲೇ ಯಾರಾದರೂ ಪ್ರಮುಖ ನಾಯಕರು ಮುಖ್ಯಮಂತ್ರಿಯಾಗುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ. ಸದ್ಯಕ್ಕೆ ಎಐಎಡಿಎಂಕೆ ಅಧಿಕಾರಾವಧಿ ಇನ್ನೂ ನಾಲ್ಕು ವರ್ಷ ಇರುವುದರಿಂದ ಮುಖ್ಯಮಂತ್ರಿ ಯಾರು ಎನ್ನುವುದು ಪ್ರಶ್ನೆಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ