ವೃಂದಾವನದಲ್ಲಿ ಬಂಗಾಳ ವಿಧವೆಯರು ಉಳಿದುಕೊಳ್ಳೋದ್ಯಾಕೆ: ಹೇಮಮಾಲಿನಿ ಪ್ರಶ್ನೆ

ಗುರುವಾರ, 18 ಸೆಪ್ಟಂಬರ್ 2014 (13:25 IST)
ಮಥುರಾದ ಪವಿತ್ರ ಕ್ಷೇತ್ರವಾದ ಬೃಂದಾವನದಲ್ಲಿ ಪಶ್ಚಿಮಬಂಗಾಳ ಹಾಗೂ ಬಿಹಾರದ ವಿಧವೆಯರು ಉಳಿದುಕೊಳ್ಳುವ ಅಗತ್ಯವಿಲ್ಲ. ಅವರ ರಾಜ್ಯಗಳಿಗೆ ಹಿಂತಿರುಗಬಹುದು. ಬಂಗಾಳದಲ್ಲೂ ಪವಿತ್ರ ಕ್ಷೇತ್ರಗಳಿದ್ದು, ಅಲ್ಲಿನ ವಿಧವೆಯರು ಯಾಕೆ ಅಲ್ಲೇ ಉಳಿಯಬಾರದು ಎಂದು ವಿವಾದಾತ್ಮಕ ಹೇಳಿಕೆಯನ್ನು ಬಿಜೆಪಿ ಸಂಸದೆ ಹೇಮಮಾಲಿನಿ ನೀಡಿದ್ದಾರೆ.
 
ಮಥುರಾ ಕ್ಷೇತ್ರಕ್ಕೆ ಸೇರುವ ವೃಂದಾವನವು ಸಾವಿರಾರು ವಿಧವೆಯರಿಗೆ ಆಶ್ರಯತಾಣವಾಗಿದೆ. ಮಂಗಳವಾರ 65 ವರ್ಷದ ಮಾಜಿ ಬಾಲಿವುಡ್ ನಟಿ ಆಶ್ರಯ ಧಾಮವೊಂದಕ್ಕೆ ಭೇಟಿ ನೀಡಿ, ವೃಂದಾವನದಲ್ಲಿ ಈಗಾಗಲೇ 40,000 ವಿಧವೆಯರಿದ್ದು, ನಗರದಲ್ಲಿ ವಿಧವೆಯರಿಗೆ ಉಳಿದುಕೊಳ್ಳಲು ಜಾಗವೇ ಇಲ್ಲ. ಬಂಗಾಳದಲ್ಲಿ ವಿಧವೆಯರ ಹಿಂಡು ಇಲ್ಲಿಗೆ ಬರುತ್ತಿದೆ. ಅವರು ಬಂಗಾಳದಲ್ಲೇ ಏಕೆ ಉಳಿದುಕೊಳ್ಳಬಾರದು.

ಬಿಹಾರದ ವಿಧವೆಯರಿಗೂ ಈ ಮಾತು ಅನ್ವಯಿಸುತ್ತದೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕೆಲವು ಮಹಿಳೆಯರು ಬಿಜೆಪಿ ಸಂಸದೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಾವು ವೃಂದಾವನವನ್ನು ಇಷ್ಟಪಡುವುದರಿಂದ ಇಲ್ಲಿ ಉಳಿದುಕೊಂಡಿದ್ದೇವೆ. ಇದು ನಮ್ಮ ದೇಶವಾಗಿದ್ದು, ನಾವು ಇಷ್ಟಪಟ್ಟ ಕಡೆ ವಾಸಿಸುವ ಹಕ್ಕು ಹೊಂದಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಕೂಡ ಹೇಮಮಾಲಿನಿ ಹೇಳಿಕೆಯನ್ನು ಖಂಡಿಸಿದ್ದಾರೆ. ಅವರ ಮಾತನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ