ದೇಶವನ್ನು ತುಂಡು ತುಂಡಾಗಿ ಕತ್ತರಿಸುತ್ತೇವೆ ಎಂದವರಿಗೆ ನಿಮ್ಮ ಬೆಂಬಲ ಯಾಕೆ?: ರಾಹುಲ್‌ಗೆ ಬಿಜೆಪಿ ಸಂಸದನ ಪ್ರಶ್ನೆ

ಬುಧವಾರ, 24 ಫೆಬ್ರವರಿ 2016 (17:46 IST)
ಶತಮಾನದ ಹಳೆಯ ರಾಜಕೀಯ ಪಕ್ಷವಾದ ಕಾಂಗ್ರೆಸ್‌, ಕುಟುಂಬ ಮೊದಲು, ಪಕ್ಷ ಎರಡನೇಯದು ಮತ್ತು ಕೊನೆಯದು ದೇಶ ಎನ್ನುವ ಘೋಷಣೆಯಲ್ಲಿ ನಂಬಿಕೆಯಿಡುತ್ತದೆ. ದೇಶ ಒಡೆದು ಛಿದ್ರಗೊಳಿಸ್ತೇವೆ ಎಂದವರಿಗೆ ನಿಮ್ಮ ಬೆಂಬಲ ಯಾಕೆ? ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ ಗಾಂಧಿಗೆ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಪ್ರಶ್ನಿಸಿದ್ದಾರೆ.
 
ಜೆಎನ್‌ಯು ಮತ್ತು ರೋಹಿತ್ ವೆಮುಲಾ ಆತ್ಮಹತ್ಯೆ ಪ್ರಕರಣ ಕುರಿತಂತೆ ನಡೆದ ಲೋಕಸಭೆಯ ಚರ್ಚೆಯಲ್ಲಿ ಪಾಲ್ಗೊಂಡ ಠಾಕೂರ್, ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಕ್ಕೆ ತೆರಳಿ ದೇಶವಿರೋಧಿ ಘೋಷಣೆಗಳನ್ನು ಕೂಗಿದವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿದರು. 
 
ದೇಶ ವಿರೋಧಿ ಘೋಷಣೆಗಳನ್ನು ಕೂಗಿದ ಡಿಎಸ್‌ಯು ಸದಸ್ಯರೊಂದಿಗೆ ರಾಹುಲ್ ಹೆಗಲಿಗೆ ಹೆಗಲು ಕೊಟ್ಟು ನಿಂತಿರುವುದು ಯಾಕೆ ಎಂದು ಕಿಡಿಕಾರಿದ್ದಾರೆ. ರಾಹುಲ್, ಗಾಂಧಿ ವಿಚಾರಧಾರೆಗಳ ಪರವಾಗಿದ್ದಾರೆಯೇ ಅಥವಾ ಮಾವೋವಾದಿ ವಿಚಾರಧಾರೆ ಹೊಂದಿದ್ದಾರೆಯೇ ಎನ್ನುವ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದರು.
 
ರಾಹುಲ್‌ಜಿ, ದೇಶವನ್ನು ತುಂಡು ತುಂಡಾಗಿ ಕತ್ತರಿಸುತ್ತೇವೆ ಎಂದು ಘೋಷಣೆಗಳನ್ನು ಕೂಗಿದವರಿಗೆ ಬೆಂಬಲ ನೀಡುತ್ತಿದ್ದೀರಿ. ನೀವು ಒಡೆದ ದೇಶದ ಯಾವ ಭಾಗವನ್ನು ಆಳಲು ಬಯಸುತ್ತೀರಿ ಎನ್ನುವ ಬಗ್ಗೆ ದೇಶದ ಮುಂದೆ ಹೇಳಿಕೆ ನೀಡಿ ಎಂದು ವಾಗ್ದಾಳಿ ನಡೆಸಿದ್ದಾರೆ.  
 
ಸಂಸತ್ ಮೇಲೆ ದಾಳಿ ಮಾಡಿದ ಉಗ್ರ ಅಫ್ಜಲ್ ಗುರು ಪರವಾಗಿಯೋ ಅಥವಾ ಸಂಸತ್ತನ್ನು ರಕ್ಷಿಸಿದವರ ಪರವಾಗಿಯೋ ಎನ್ನುವುದನ್ನು ರಾಹುಲ್ ಗಾಂಧಿಯೇ ನಿರ್ಧರಿಸಲಿ ಎಂದು ಬಿಜೆಪಿ ಸಂಸದ ಠಾಕೂರ್ ಲೇವಡಿ ಮಾಡಿದರು.

ವೆಬ್ದುನಿಯಾವನ್ನು ಓದಿ