ಕಲಾಂ ಸಸ್ಯಾಹಾರಿಯಾಗಿದ್ದು ಏಕೆ ಗೊತ್ತೆ?

ಬುಧವಾರ, 29 ಜುಲೈ 2015 (13:16 IST)
ಮುಸ್ಲಿಂ ಕುಟುಂಬವೊಂದರಲ್ಲಿ ಜನಿಸಿದ್ದ ಕಲಾಂ ಸಸ್ಯಾಹಾರಿಯಾಗಿದ್ದರು ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದ ಸಂಗತಿ. ಆದರೆ ಅವರು ಯಾಕೆ ಮಾಂಸಾಹಾರವನ್ನು ತ್ಯಜಿಸಿದರು ಎಂಬುದು ನಿಮಗೆ ಗೊತ್ತೆ? 

ಕಡು ಬಡತನದಲ್ಲಿ ಬೇಯುತ್ತಿದ್ದ ಕಲಾಂ ಕುಟುಂಬಕ್ಕೆ ಅವರ ವಿದ್ಯಾಭ್ಯಾಸಕ್ಕೆ ಸಾಕಷ್ಟು  ಹಣವನ್ನು ಒದಗಿಸುವುದು ಕಷ್ಟಕರವಾಗಿತ್ತು. 1950ರ ದಶಕದಲ್ಲಿ ಕಲಾಂ ಹಾಸ್ಟೆಲ್‍ನಲ್ಲಿದ್ದು ಓದುತ್ತಿದ್ದಾಗ ವಿದ್ಯಾರ್ಥಿ ವೇತನದಿಂದಲೇ ಅವರ ಖರ್ಚುವೆಚ್ಚಗಳನ್ನು ತೂಗಿಸಿಕೊಳ್ಳುತ್ತಿದ್ದರು. ಆಗ ಅಪರೂಪಕ್ಕೆ ಮಾಂಸಾಹಾರವನ್ನು  ಸೇವಿಸುತ್ತಿದ್ದ ಅವರು ಹಣಕಾಸಿನ ಸಮಸ್ಯೆ ಕಾರಣಕ್ಕೆ ಸಸ್ಯಾಹಾರಿಯಾಗಿ ಬದಲಾದರು. 
 
ಅವರು ಓದುತ್ತಿದ್ದ ಕಾಲೇಜ್‌ನಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರಕ್ಕೆ ಎರಡು ಪ್ರತ್ಯೇಕ ಮೆಸ್ ಇತ್ತು. ಹಾಸ್ಟೆಲ್‌ಗೆ ಸೇರ್ಪಡೆಯಾದೊಡನೆ ಅವರು ಸಸ್ಯಾಹಾರಿ ಯಾಗಿ ಬದಲಾದರು. 
 
"ಹಾಸ್ಟೆಲ್ ದಿನಗಳಲ್ಲಿ ಸಸ್ಯಾಹಾರ ಒದಗಿಸುತ್ತಿದ್ದ ಮೆಸ್‌ನ ಶುಲ್ಕ ಕಡಿಮೆಯಾಗಿತ್ತು. ಆದ್ದರಿಂದ ನಾನು ಸಸ್ಯಾಹಾರವನ್ನು ಆಯ್ಕೆ ಮಾಡಿಕೊಂಡೆ.  ಆಮೇಲೆ ಸಸ್ಯಾಹಾರಕ್ಕೆ ನಾನು ಒಗ್ಗಿಕೊಂಡು ಬಿಟ್ಟೆ. ಅಂದು ನಾನು ತೆಗೆದುಕೊಂಡ ತೀರ್ಮಾನ ಸಮರ್ಪಕವಾಗಿತ್ತು", ಎಂದು ಕಲಾಂ ಒಮ್ಮೆ ಹೇಳಿಕೊಂಡಿದ್ದರು.
 
ಅಷ್ಟೇ ಅಲ್ಲದೇ ಅಮ್ಮನ ಜೊತೆ ಇರುವಾಗಲೂ ಅವರು ಅನ್ನ- ರಸಂ ಅನ್ನೇ ಇಷ್ಟಪಟ್ಟು ತಿನ್ನುತ್ತಿದ್ದರಂತೆ .ಐಯ್ಯಂಗಾರ್ ಪುಳಿಯೋಗರೆ ಎಂದರೆ ಅವರಿಗೆ ತುಂಬಾ ಇಷ್ಟವಾಗಿತ್ತಂತೆ. ತಮ್ಮ ಪುಸ್ತಕದಲ್ಲಿ ಅವರಿದನ್ನು ಹೇಳಿಕೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ