ನನ್ನ ಕಳಪೆ ನಟನೆಗಾಗಿ ಕೊಹ್ಲಿಯನ್ನೇಕೆ ದೂಷಿಸುತ್ತಿಲ್ಲ? ಟೀಕಾಕಾರರಿಗೆ ಅನುಷ್ಕಾ ತಿರುಗೇಟು

ಮಂಗಳವಾರ, 19 ಆಗಸ್ಟ್ 2014 (13:42 IST)
ಇಂಗ್ಲೆಂಡ್ ಪ್ರವಾಸದಲ್ಲಿ ಧೋನಿ ಪಡೆ ಹೀನಾಯ ಸೋಲನ್ನು ಅನುಭವಿಸಿದ್ದು, ಒಂದು ತಿಂಗಳ ಕಾಲ ದೂರದರ್ಶನದ ಮುಂದೆ ಕುಳಿತು ತಮ್ಮ ಸಮಯ ವ್ಯರ್ಥ ಮಾಡಿಕೊಂಡ ಅಭಿಮಾನಿಗಳಲ್ಲಿ ಮೂಡಿರುವ ಪ್ರಕ್ಷುಬ್ಧತೆ ಸೋಲಿಗಾಗಿ ಯಾರನ್ನಾದರೂ ದೂಷಿಸುವುದರ ಕಡೆ ಹರಿದಿದೆ. 

ಸಾಮಾನ್ಯ ಕ್ರಿಕೆಟ್ ಅರ್ಥದಲ್ಲಿ ಸೋಲಿಗೆ ತಂಡದ ನಾಯಕ, ಕೋಚ್, ಬಿಸಿಸಿಐ ಮತ್ತು ಆಯ್ಕೆಗಾರರನ್ನು ಜವಾಬ್ದಾರರನ್ನಾಗಿಸಬಹುದು. ಆದರೆ ಭಾರತೀಯ ತಂಡದ ಅಭಿಮಾನಿಗಳ ಒಮ್ಮತದ ಅಭಿಪ್ರಾಯದ ಪ್ರಕಾರ ವಿರಾಟ್ ಕೊಹ್ಲಿ ಕಳಪೆ ಫಾರ್ಮ್‌ನಿಂದಾಗಿ  ಸರಣಿ ಸೋಲುಣ್ಣ ಬೇಕಾಯಿತು. ಹಾಗಾಗಿ ಭಾರತ  ತಂಡದ ಸೋಲಿಗೆ ಅನುಷ್ಕಾ ಶರ್ಮಾ ಜವಾಬ್ದಾರಳು ಎನ್ನುವುದು ಅಭಿಮಾನಿಗಳ ಆಕ್ರೋಶವಾಗಿದೆ.  
 
ಭಾರತ ಬ್ರಿಟಿಷ್ ನಾಡಿಗೆ ಪಯಣ ಬೆಳೆಸಿದ್ದಾಗಿನಿಂದ ತಮ್ಮ ಮೇಲೆ ಎರಗುತ್ತಿರುವ ಆಕ್ಷೇಪಣೆಗಳಿಂದ ನಟಿ ತೀವೃ ಅಸಮಾಧಾನಗೊಂಡಿದ್ದಾರೆ.  
 
ಭಾರತೀಯ ತಂಡವನ್ನು ಮೊದಲಿನ ಲಯಕ್ಕೆ ತರಲು ಏನು ಮಾಡಬೇಕು ಎಂಬುದರ ಕುರಿತು ನಿಮ್ಮ ಪ್ರತಿಕ್ರಿಯೆ ಏನು ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಆಟವನ್ನು ಕೂಡ ಆಡುತ್ತಿಲ್ಲ, ಹಾಗಿದ್ದರೆ ನಾನು ನಿವೃತ್ತಿಯನ್ನಾದರೂ ಘೋಷಿಸಿ ಬಿಡುತ್ತಿದ್ದೆ ಎಂದು ಹತಾಶೆಭರಿತ ಸಿಟ್ಟಿನಲ್ಲಿ ಪ್ರತಿಕ್ರಿಯಿಸಿದ್ದಾರೆ.
 
 ಕಳೆದ 6 ತಿಂಗಳಿಂದ ಕೊಹ್ಲಿ ಆಟ ಮಂಕಾಗಿರುವುದಕ್ಕೆ ಇದ್ದಕ್ಕಿದ್ದಂತೆ ನಾನು ಜವಾದ್ದಾರಳೇ? ಕಳೆದ ಕೆಲ ವರ್ಷಗಳಿಂದ ನನ್ನ ನಟನೆ ಪೇಲವವಾಗಿರುವುದನ್ನು ಯಾರಾದರೂ ಗುರುತಿಸಿದ್ದೀರಾ? ಅದಕ್ಕೆ ಕಾರಣ ಕೊಹ್ಲಿ ಎಂದು ದೂಷಿಸಿದ್ದೀರಾ ಎಂದಾಕೆ ಖಾರವಾಗಿ ಪ್ರಶ್ನಿಸಿದ್ದಾಳೆ. 
 
ನನ್ನ ಪ್ರಥಮ ಸಿನಿಮಾಗಾಗಿ ನಾನು ಉದಯೋನ್ಮುಖ ನಟಿ ಪ್ರಶಸ್ತಿ ಪಡೆದಿದ್ದೆ. ಅದರ ನಂತರ ನಾನು  ಆ ವಿಭಾಗದಲ್ಲಿ ನಾಮ ನಿರ್ದೇಶಿತಳು ಕೂಡ ಆಗಿಲ್ಲ.ಜಬ್ ತಕ್ ಹೈ ಜಾನ್ ಸಿನಿಮಾದ ನಟನೆಗಾಗಿ ನಾಮ ನಿರ್ದೇಶಿತಗೊಂಡ ನನ್ನ ಹೆಸರನ್ನು  ಪ್ರಮುಖ ಅಭಿನೇತ್ರಿ ಪಟ್ಟಿಯಿಂದ ಪೋಷಕ ನಟಿ ಪಟ್ಟಿಗೆ ವರ್ಗಾಯಿಸಲಾಯಿತು. ಅದನ್ನು ಯಾರೂ ಪ್ರಸ್ತಾಪಿಸಲಿಲ್ಲ. ಕೊಹ್ಲಿ ಆಟ ಕಳಪೆಯಾದಾಗ ,ನೀನು ಇಂಗ್ಲೆಂಡ್‌ನಲ್ಲಿದ್ದೀಯಾ ಎಂದು ಎಲ್ಲರೂ ನನ್ನನ್ನು  ಪ್ರಶ್ನಿಸುತ್ತಾರೆ.  ಕೊಹ್ಲಿ ಭಾರತದಲ್ಲಿದ್ದಾಗ ನೀನು  ಎಲ್ಲಿಗೆ ಹೋಗಿದ್ದಿ ಎಂದು ಆತನ ತಂದೆ ತಾಯಿಗಳೇಕೆ ಆತನನ್ನು  ಪ್ರಶ್ನಿಸುತ್ತಿಲ್ಲಾ? ಎಂದು ಕೋಪದಲ್ಲಿ ಮಾತನಾಡಿರುವ ನಟಿ ಇವುಗಳಿಗೆ ಉತ್ತರ ನೀಡುವಂತೆ ಟೀಕಾಕಾರರಿಗೆ ಸವಾಲು ಹಾಕಿದ್ದಾಳೆ. 

ವೆಬ್ದುನಿಯಾವನ್ನು ಓದಿ