ಕಾಕಾ ಕಲಾಂ ಅಗಲಿದ ನೋವಲ್ಲಿ ಊಟ ಬಿಟ್ಟ ಬಾಲಕ

ಶುಕ್ರವಾರ, 31 ಜುಲೈ 2015 (11:55 IST)
ಮೆಚ್ಚಿನ ಕಲಾಂ ನಿಧನಕ್ಕೆ ಸಂಪೂರ್ಣ ದೇಶವೇ ಶೋಕಸಾಗರದಲ್ಲಿ ಮುಳುಗಿದೆ. ಅಗಲಿದ ಆತ್ಮಕ್ಕೆ ಶಾಂತಿಯನ್ನು ಕೋರುತ್ತಿದೆ. ಆದರೆ ಉತ್ತರ ಪ್ರದೇಶದ ಈ ಬಾಲಕನ ಶೋಕ ಮಾತ್ರ ನಾಲ್ಕು ದಿನಗಳಾದರೂ ಸ್ವಲ್ಪವೂ ನಿಲ್ಲುತ್ತಿಲ್ಲ. 

 
ಕಲಾಂ ಅವರು ಸಾವನ್ನಪ್ಪಿದ ಸುದ್ದಿ ಕೇಳಿದಾಗಿನಿಂದ ಆಹಾರವನ್ನು ಸಹ ತ್ಯಜಿಸಿ ಕುಳಿತಿದ್ದಾನೆ ಆಕಾಶ್ ಎಂಬ ಉತ್ತರ ಪ್ರದೇಶದ ಬಾಲಕ. 
 
ಕಲಾಂ ಅವರನ್ನು ಅಪಾರವಾಗಿ ಆರಾಧಿಸುತ್ತಿದ್ದ ಬಾಲಕ ಅವರನ್ನು ಕಾಕಾ ಎನ್ನುತ್ತಿದ್ದ. ಆಕಾಶ್ ನಿವೃತ್ತ ಸೇನಾಧಿಕಾರಿಯ ಮಗನಾಗಿದ್ದು 2009ರಲ್ಲಿ ಆತ ಲಿವರ್ ಸಮಸ್ಯೆಗೆ ಸಿಲುಕಿ ದೆಹಲಿಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ. ಆಗ ವೈದ್ಯರು ನಿನಗೆ ಯಾರು ಸ್ಪೂರ್ತಿ ಎಂದಾಗ ಆತ ಕಲಾಂ ಎಂದಿದ್ದ. ಆತನ ಆರೋಗ್ಯ ಸ್ಥಿತಿ ಡೋಲಾಯಮಯವಾಗಿತ್ತು. ವೈದ್ಯರು ಆತನಿಗೆ ಲಿವರ್ ಕಸಿ ಮಾಡುವುದಕ್ಕೆ ನಿರ್ಧರಿಸಿದರು. ಆತನಿಗೆ ಸ್ಪೂರ್ತಿ ತುಂಬಲು ವೈದ್ಯರು ನೀನು ಕಲಾಂ ಅವರನ್ನು ಭೇಟಿಯಾಗಲು ಬಯಸುತ್ತೀಯಾ ಎಂದಾಗ ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆಸ್ಪತ್ರೆಯ ಅಧಿಕಾರಿಗಳು ಕಲಾಂ ಅವರ ಬಳಿ ಬಾಲಕನ ಕುರಿತು  ಸಂದೇಶ ಕಳುಹಿಸಿದಾಗ ಮಕ್ಕಳನ್ನು ಅಪಾರವಾಗಿ ಪ್ರೀತಿಸುವ ಅವರು ಆಸ್ಪತ್ರೆಗೆ ಧಾವಿಸಿ ಬಂದಿದ್ದರು. ಆತನ ಜತೆ ಸಮಯ ಕಳೆದು, ಧೈರ್ಯ ತುಂಬಿ, ಗೆಟ್ ವೆಲ್ ಸೂನ್  ಕಾರ್ಡ್ ಇತ್ತು ನಿರ್ಗಮಿಸಿದ್ದರು. ಕಾಕಾನ ಈ ಪ್ರೀತಿಗೆ ಮೂಕ ವಿಸ್ಮಿತನಾದ ಬಾಲಕನಿಗೆ ಅವರ ಮೇಲಿನ ಪ್ರೀತಿ ಇಮ್ಮಡಿಯಾಯಿತು. 
 
ಈಗ ಬಾಲಕ ಕಲಾಂ ಅವರನ್ನು ತಾನು ಮತ್ತೆಂದೂ ಕಾಣೆನೆಂಬ ಶೋಕದಲ್ಲಿ ಊಟ- ತಿಂಡಿ ಬಿಟ್ಟು ಕುಳಿತಿದ್ದಾನೆ. ಕೇವಲ ಟೀ ಬಿಟ್ಟು ಏನನ್ನೂ ಆತ ಸೇವಿಸಿಲ್ಲ. ಆತನ ಮುಗ್ಧ ಪ್ರೀತಿಗೆ ಏನನ್ನುತ್ತೀರಾ? 
 
 
ಆತನ ತಂದೆ ದೆಹಲಿಗೆ ತೆರಳಿ ಕಲಾಂ ಅವರಿಗೆ ಅಂತಿಮ ನಮನವನ್ನು ಸಲ್ಲಿಸಿ ಬಂದಿದ್ದಾರೆ.  

ವೆಬ್ದುನಿಯಾವನ್ನು ಓದಿ