ನೆಹರು ಮನೆತನದ ಧರ್ಮ ಬದಲಾಯಿಸಿದ ಮೋದಿ ಸರ್ಕಾರ ?

ಬುಧವಾರ, 1 ಜುಲೈ 2015 (14:41 IST)
ಮೋದಿ ಸರಕಾರದ ಮೇಲೆ ಕಾಂಗ್ರೆಸ್ ಹೊಸದೊಂದು ಆರೋಪವನ್ನು ಮಾಡಿದೆ. ವಿಕಿಪಿಡಿಯಾ ಪುಟದಲ್ಲಿ ದೇಶದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು, ಅವರ ತಂದೆ ಮೋತಿಲಾಲ್ ನೆಹರು ಮತ್ತು ಅಜ್ಜ ಗಂಗಾಧರ್ ಕುರಿತ ಮಾಹಿತಿಯನ್ನು  ಕೇಂದ್ರ ತಿದ್ದಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ದೂರಿದ್ದಾರೆ. 
 
'ಭಾರತ ಸರ್ಕಾರದ ಐಪಿ (ಇಂಟರ್ನೆಟ್ ಪ್ರೊಟೊಕಾಲ್) ಮೂಲಕವೇ ನೆಹರು ಮನೆತನದ ವಿವರವನ್ನು ತಿದ್ದಲಾಗಿದೆ. ಪ್ರತಿಷ್ಠಿತ ಮನೆತನವನ್ನು ಮುಸಲ್ಮಾನ್ ಮತಸ್ಥರು ಎಂದು ಬಿಂಬಿಸುವ ಪ್ರಯತ್ನ ನಡೆಸಲಾಗಿದೆ. ಗಂಗಾಧರ್ ನೆಹರು ಮುಸಲ್ಮಾನರಾಗಿದ್ದರು ಎಂದು ವಿಕಿಪಿಡಿಯಾ ಪುಟದಲ್ಲಿ ತಿದ್ದಲಾಗಿತ್ತು. ಇದಕ್ಕೆ ಸರಕಾರಿ ಒಡೆತನದ ನ್ಯಾಷನಲ್ ಇನ್ಫರ್ಮ್ಯಾಟಿಕ್ಸ್ ಸೆಂಟರ್ (ಎನ್ಐಸಿ) ಜವಾಬ್ದಾರಿ', ಎಂದಿದೆ ಕಾಂಗ್ರೆಸ್.
 
"ಗಂಗಾಧರ ನೆಹರು ಹುಟ್ಟಿನಿಂದಲೇ ಮುಸ್ಲಿಂ ಆಗಿದ್ದರು. ಅವರ ಹೆಸರು ಘಿಯಾಸುದ್ದೀನ್ ಘಾಝಿ ಎನ್ನುವದಾಗಿತ್ತು. ಬ್ರಿಟಿಷರ ಬಿಗಿಹಿಡಿತದಿಂದ ತಪ್ಪಿಸಿಕೊಳ್ಳಲು ಅವರು ತಮ್ಮ ಹೆಸರನ್ನು ಹಿಂದೂ ಹೆಸರಾದ ಗಂಗಾಧರ ಎಂದು ಬದಲಾಯಿಸಿಕೊಂಡರು ಎಂದು ಎಡಿಟ್ ಮಾಡಲಾಗಿತ್ತು", ಎಂದು ಸುರ್ಜೇವಾಲ್ ಆರೋಪಿಸಿದ್ದಾರೆ. 
 
ಮೋತಿಲಾಲ್ ನೆಹರು ಮತ್ತು ಜವಾಹರಲಾಲ್ ಕುರಿತ ಪುಟಗಳಲ್ಲಿ ಸಹ ಎಡಿಟ್ ಮಾಡಲಾಗಿದ್ದು, ಭಾರತದ ಮೊದಲ ಗವರ್ನರ್ ಜನರಲ್ ಲಾರ್ಡ್ ಮೌಂಟ್ ಬ್ಯಾಟನ್ ಪತ್ನಿ ಎಡ್ವಿನಾ ಜತೆಗಿನ ನೆಹರುರವರ ಸಂಬಂಧಗಳ ಕುರಿತು ಸಹ ನಮೂದಿಸಲಾಗಿತ್ತು. 

"ನೆಹರು ಎಲ್ಲಕ್ಕಿಂತ ಮೊದಲು ಭಾರತೀಯರಾಗಿದ್ದರು. ಭಾರತ ಸರ್ಕಾರ ಇಂತಹ ಕೃತ್ಯಕ್ಕೆ ಕೈ ಹಾಕುವ ಪ್ರಯತ್ನ ನಡೆಸಿದ್ದಾಕೆ? ಎನ್ಐಸಿ, ಆರ್‌ಎಸ್ಎಸ್‌ನ ದುರುದ್ದೇಶಪೂರಿತ ಅಜೆಂಡಾವನ್ನು ಜಾರಿಗೆ ತರುವ ಕೆಲಸ ಮಾಡುತ್ತಿದೆಯೇ? ಮೊದಲ ಪ್ರಧಾನಿಯ ಧರ್ಮ ಪರಿವರ್ತನೆ ಮಾಡಿದ ತಪ್ಪಿದೆ ಮೋದಿ ಕ್ಷಮೆ ಕೇಳುತ್ತಾರೆಯೇ? ಈ ಕುರಿತಂತೆ ಎಫ್ಐಆರ್ ದಾಖಲಿಸಲಾಗುತ್ತದೆಯೇ? ಎಂದು ಸುರ್ಜೇವಾಲಾ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 
 
ಭಾರತ ಸರ್ಕಾರಕ್ಕೆ ತಂತ್ರಾಂಶವನ್ನು ಪೂರೈಸುವ ಎನ್ಐಸಿ (ನ್ಯಾಷನಲ್ ಇನ್ಫರ್ಮ್ಯಾಟಿಕ್ಸ್ ಸೆಂಟರ್) ನೆಹರು ಮನೆತನದ ಮಾಹಿತಿಯನ್ನು ತಿದ್ದಿದೆ ಎಂಬುದು ಇಂಟರ್ನೆಟ್ ಪ್ರೊಟೊಕಾಲ್ ವಿಳಾಸದ ಮೂಲಕ ತಿಳಿದು ಬಂದಿದೆ ಎಂದು ಸುರ್ಜೇವಾಲಾ ವಾದಿಸಿದ್ದಾರೆ.
 
ಆನ್ಲೈನ್ ಎನ್ಸೈಕ್ಲೋಪೀಡಿಯಾದ ಎಡಿಟರ್ಸ್ ಎನ್ಐಸಿ ತಿದ್ದಿದ್ದ ಮಾಹಿತಿಯನ್ನು ಅಳಿಸಿ ಹಾಕಿದ್ದಾರೆ, ಎಂದು ತಿಳಿದು ಬಂದಿದೆ. 

ವೆಬ್ದುನಿಯಾವನ್ನು ಓದಿ