ಮಾಧ್ಯಮಗಳನ್ನು 10 ಅಡಿ ಆಳದಲ್ಲಿ ಹೂತು ಹಾಕುತ್ತೇವೆ: ಬೆದರಿಕೆ ಹಾಕಿದ ತೆಲಂಗಾಣ ಸಿಎಂ

ಬುಧವಾರ, 10 ಸೆಪ್ಟಂಬರ್ 2014 (14:41 IST)
ತೆಲಂಗಾಣಕ್ಕೆ ಅವಮಾನ ಮಾಡುವುದನ್ನು ಮುಂದುವರೆಸಿದರೆ, ಮಾಧ್ಯಮಗಳನ್ನು 10 ಅಡಿ ಆಳದಲ್ಲಿ ಹೂತು ಹಾಕುವುದಾಗಿ ಬೆದರಿಕೆ ಹಾಕುವುದರ ಮೂಲಕ  ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ರಾಜ್ಯದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಬಿಸಿ ಬಿಸಿ ವಿವಾದವೊಂದನ್ನು ಹುಟ್ಟು ಹಾಕಿದ್ದಾರೆ. 

ಆಂಧ್ರಪ್ರದೇಶ ಸರಕಾರದ ಜತೆ ಆಸ್ತಿಗಳ ಮತ್ತು ಅವಿಭಜಿತ ರಾಜ್ಯದ ಹೊಣೆಗಾರಿಕೆಗಳ ವಿತರಣೆ ಕುರಿತು ತಿಕ್ಕಾಟ ನಡೆಸುತ್ತಿರುವ ಅವರು ತೆಲಂಗಾಣಕ್ಕೆ ಗೌರವ ನೀಡಲೇ ಬೇಕು ಎಂದು ಒತ್ತಾಯಿಸಿದ್ದಾರೆ. 
 
ಪ್ರಖ್ಯಾತ ಕವಿ ಮತ್ತು ಸಾಹಿತ್ಯ ವಿಮರ್ಶಕ ಕಲೋಜಿ ನಾರಾಯಣ ರಾವ್ ಜನ್ಮ ಶತಮಾನೋತ್ಸವದ ಜ್ಞಾಪಕಾರ್ಥವಾಗಿ, ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡುತ್ತಿದ್ದ ಅವರು ತೆಲಂಗಾಣದ ಅಸ್ತಿತ್ವ ಮತ್ತು ಘನತೆಯ ಕುರಿತು ಅವಮಾನಕರವಾಗಿ ನಡೆದುಕೊಂಡವರನ್ನು ನಾವು 10 ಅಡಿ ಗುಂಡಿ ತೆಗೆದು ಹೂತು ಹಾಕುತ್ತೇವೆ  ಎಂಬ ಬೇಜವಾಬ್ದಾರಿ ಮಾತುಗಳನ್ನಾಡಿದರು. 
 
ಚಂದ್ರಶೇಖರ್ ಅವರ ಈ ಮಾತನ್ನು ಖಂಡಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಕೇಂದ್ರದ ಮಾಜಿ ಸಚಿವೆ ರೇಣುಕಾ ಚೌಧರಿ ಮುಖ್ಯಮಂತ್ರಿಯವರು ಸಂಯಮವನ್ನು ಅನುಸರಿಸಬೇಕು. ಹಿರಿಮೆಯ ಅರ್ಥವನ್ನು ತಪ್ಪಾಗಿ ಅರ್ಥೈಸಿಕೊಂಡಿರುವ ಅವರು ಆಡಳಿತದ ಕುರಿತು ಹೆಚ್ಚಿನ ಜ್ಞಾನವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. 
 
ಎಬಿನ್ ಆಂಧ್ರ ಜ್ಯೋತಿ ಮತ್ತು ಟಿವಿ 9 ಚಾನೆಲ್‌ಗಳು ತೆಲಂಗಾಣದ ಜನರ ಆಡು ಭಾಷೆ ಮತ್ತು ಭಾವನೆಗಳ ಕೀಳಾಗಿ ಬಿಂಬಿಸುವ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿವೆ ಎಂಬ ಆರೋಪದ ಮೇಲೆ ಕಳೆದ ಜೂನ್ 19 ರಿಂದ ತೆಲಂಗಾಣ ಬಹು ವ್ಯವಸ್ಥೆ ಕಾರ್ಯಕರ್ತರ ಸಂಘ (ಕೇಬಲ್ ಟಿವಿ ಆಪರೇಟರ್) ಈ ಎರಡು ಚಾನೆಲ್ ಪ್ರಸಾರವನ್ನು ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಸಿಎಂ ಈ ಮಾತುಗಳನ್ನಾಡಿದ್ದಾರೆ. 

ವೆಬ್ದುನಿಯಾವನ್ನು ಓದಿ