ಜನಲೋಕಪಾಲ್‌ಗೆ ಅಡ್ಡಿಯಾದ್ರೆ ಕೇಂದ್ರದ ವಿರುದ್ಧ ಪ್ರತಿಭಟನೆಗೆ ನಾವು ರೆಡಿ ಎಂದ ಅಣ್ಣಾ ಹಜಾರೆ

ಮಂಗಳವಾರ, 1 ಡಿಸೆಂಬರ್ 2015 (18:00 IST)
ಆಮ್ ಆದ್ಮಿ ಪಕ್ಷದ ಸರಕಾರ ದೆಹಲಿ ವಿಧಾನಸಭೆಯಲ್ಲಿ ಮಂಡಿಸಿದ ಜನಲೋಕಪಾಲ್ ಮಸೂದೆಗೆ ಒಂದು ವೇಳೆ, ಕೇಂದ್ರದಲ್ಲಿರುವ ಎನ್‌ಡಿಎ ಸರಕಾರ ಅಡ್ಡಿಯಾದಲ್ಲಿ ನಾನು ಮಧ್ಯಪ್ರವೇಶಿಸಬೇಕಾಗುತ್ತದೆ ಎಂದು ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಎಚ್ಚರಿಸಿದ್ದಾರೆ.
 
ನಿನ್ನೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಂಡಿಸಿದ ಜನಲೋಕಪಾಲ್ ಮಸೂದೆ ಕುರಿತಂತೆ ರಾಲೇಗಣ್ ಸಿದ್ದಿಯಲ್ಲಿರುವ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆಯವರನ್ನು ಆಪ್ ನಾಯಕರಾದ ಕುಮಾರ್ ವಿಶ್ವಾಸ ಮತ್ತು ಸಂಜಯ್ ಸಿಂಗ್ ಭೇಟಿ ಮಾಡಿ ಮಸೂದೆಯ ವಿವರಣೆ ನೀಡಿದರು.
 
ಜನಲೋಕಪಾಲ್ ಮಸೂದೆಯ ಬಗ್ಗೆ ಮಾಹಿತಿ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹಜಾರೆ, ಜನಲೋಕಪಾಲ್‌ ಮಸೂದೆಗೆ ಕೇಂದ್ರ ಸರಕಾರ ಅಡ್ಡಿಯಾಗುವುದು ಬೇಡ ಎಂದು ಸಲಹೆ ನೀಡಿದ್ದಾರೆ. 
 
ದೆಹಲಿಯಲ್ಲಿ ಕೇಂದ್ರ ಸರಕಾರದ ಕಚೇರಿಗಳು ಭ್ರಷ್ಟಾಚಾರ ತನಿಖಾ ವ್ಯಾಪ್ತಿಗೆ ಬರುವುದರಿಂದ ಜನಲೋಕಪಾಲ್ ಮಸೂದೆ ಜಾರಿಗೆ ಕೇಂದ್ರ ಸರಕಾರ ಅಡ್ಡಿಯಾಗಬಹುದು ಎಂದು ಆಪ್ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
 
ಒಂದು ವೇಳೆ, ಜನಲೋಕಪಾಲ್ ಮಸೂದೆಗೆ ಕೇಂದ್ರ ಸರಕಾರ ಅಡ್ಡಿಯಾದಲ್ಲಿ ನಾನು ಆಪ್ ಸರಕಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇನೆ. ನಾನು ನಿಮ್ಮೊಂದಿಗಿದ್ದೇನೆ ಎಂದು ಹೇಳಿದ್ದಾಗಿ ಸ್ಪಷ್ಟಪಡಿಸಿದ್ದಾರೆ. 
 
ಕೇಂದ್ರದಲ್ಲಿರುವ ಮೋದಿ ಸರಕಾರಕ್ಕೆ ಭ್ರಷ್ಟಾಚಾರವನ್ನು ನಿಯಂತ್ರಿಸುವ ಮನಸ್ಸಿಲ್ಲ. ಭ್ರಷ್ಟಾಚಾರ ನಿಯಂತ್ರಿಸಲು ಶ್ರಮಿಸುವವರನ್ನು ಸರಕಾರ ತಡೆಯುವುದು ಸೂಕ್ತವಲ್ಲ ಎಂದು ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ