ದೇಶಾದ್ಯಂತ ಗೋಹತ್ಯೆ ನಿಷೇಧ ಜಾರಿಗೆ ಚಿಂತನೆ: ರಾಜನಾಥ್ ಸಿಂಗ್

ಸೋಮವಾರ, 30 ಮಾರ್ಚ್ 2015 (15:43 IST)
ದೇಶಾದ್ಯಂತ ಗೋಹತ್ಯೆ ನಿಷೇಧ ಜಾರಿಗೆ ಚಿಂತನೆ ನಡೆಸಲಾಗುತ್ತಿದೆ. ಆದರೆ, ಪ್ರಸ್ತುತವಿರುವ ಸಂಸದೀಯ ಲೆಕ್ಕಾಚಾರದಿಂದ ಕಾನೂನು ಜಾರಿಗೆ ತರುವುದು ಸುಲಭವಲ್ಲ ಎಂದು ಕೇಂದ್ರ ಗೃಹ ಖಾತೆ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಇಂದೋರ್‌ನಲ್ಲಿ ಜೈನ ಸಾಧು ಸಂತರ ಸಮಾವೇಶದಲ್ಲಿ ಸಿಂಗ್ ಮಾತನಾಡುತ್ತಿದ್ದರು. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಕೂಡಾ ಸಭೆಯಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ ಭಾಷಣ ಮಾಡಿದ ಕೆಲ ಮುಖಂಡರು ಪ್ರಸ್ತುತ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ದೇಶಾದ್ಯಂತ ಗೋಹತ್ಯೆ ನಿಷೇಧ ಮಸೂದೆ ಮಂಡಿಸುವಂತೆ ಒತ್ತಾಯಿಸಿದರು.

ಆದಾಗ್ಯೂ ಸಭೆಯಲ್ಲಿ ಯಾವುದೇ ಭರವಸೆ ನೀಡದ ಸಚಿವ ಸಿಂಗ್ , ಗೋಹತ್ಯೆ ನಿಷೇಧ ಕುರಿತಂತೆ ಸಂಸತ್ತಿನಲ್ಲಿ ಒಮ್ಮತಕ್ಕೆ ಬರುವ ಪ್ರಯತ್ನ ನಡೆಸಲಾಗುತ್ತಿದೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಮಸೂದೆಯನ್ನು ಸದನದಲ್ಲಿ ಮಂಡಿಸಲು ಪ್ರಯತ್ನಿಸುತ್ತೇನೆ. ಗೋಹತ್ಯೆ ನಿಷೇಧ ಜಾರಿಗೆ ತಂದ ಮಧ್ಯಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳ ಕಾರ್ಯಶೈಲಿಯನ್ನು ಹೊಗಳಿದರು.

ರಾಜಕೀಯ ರಂಗದ ಭೀಷ್ಮರಾಗಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರ್ ವಾಜಪೇಯಿ ಪ್ರಧಾನಿಯಾಗಿದ್ದಾಗ ಸಚಿವನಾಗಿ ಸದನದಲ್ಲಿ ಗೋಹತ್ಯೆ ನಿಷೇಧ ಮಸೂದೆಯನ್ನು ಮಂಡಿಸಿದ್ದೆ. ಆದರೆ, ಕೆಲ ಕಾರಣಗಳಿಂದ ನೆನಗುದಿಗೆ ಬಿದ್ದಿತ್ತು ಎಂದು ಕೇಂದ್ರ ಗೃಹ ಖಾತೆ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ