ಅವಳಿ ರೈಲು ದುರಂತ: 30 ಸಾವು

ಬುಧವಾರ, 5 ಆಗಸ್ಟ್ 2015 (09:44 IST)
ಮಧ್ಯಪ್ರದೇಶದ ಹರ್ದಾದ ಕುಡುವಾ ಗ್ರಾಮದ ಬಳಿ ತಡರಾತ್ರಿ ಅವಳಿ ರೈಲು ದುರಂತ ಸಂಭವಿಸಿದೆ. ಪರಿಣಾಮ ಕನಿಷ್ಠ 30 ಜನ ದಾರುಣವಾಗಿ ಸಾವನ್ನಪ್ಪಿದ್ದು  60ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. 300ಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಲಾಗದ್ದು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಹರ್ದಾ ಬಳಿಯ ಖಿರ್ಕಿಯಾ ಹಾಗೂ ಭಿರಂಜಿ ಸ್ಟೇಷನ್ ಮಧ್ಯೆ ಈ ದುರಂತ ಸಂಭವಿಸಿದೆ.
 
ಮಂಗಳವಾರ ರಾತ್ರಿ ಸುಮಾರು 11.30ರ ಸುಮಾರಿಗೆ ಈ ದುರ್ಘಟನೆ ನಡೆದಿದ್ದು, ವಾರಣಾಸಿಯಿಂದ ಮುಂಬೈ ಕಡೆ ಸಾಗುತ್ತಿದ್ದ ಕಾಮಾಯಾನಿ ಎಕ್ಸ್‌ಪ್ರೆಸ್‌ ಮತ್ತು ಜಬಲ್ಪುರದಿಂದ ಮುಂಬೈಯತ್ತ  ಬರುತ್ತಿದ್ದ ಜನತಾ ಎಕ್ಸ್‌ಪ್ರೆಸ್‌ ದುರಂತಕ್ಕೀಡಾದ ರೈಲುಗಳಾಗಿವೆ. ಕಾಮಾಯನಿ ಎಕ್ಸಪ್ರೆಸ್‌ನಲ್ಲಿದ್ದ 20 ಜನರು ಮತ್ತು ಜನತಾ ಎಕ್ಸಪ್ರೆಸ್‌ನಲ್ಲಿದ್ದ 10 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
 
ಕಾಮಯಾನಿ ಎಕ್ಸ್‌ಪ್ರೆಸ್ ಕಾಳಿ ಮಾಚಕ್ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಮೇಲೆ ಬರುತ್ತಿದ್ದಂತೆ ಸೇತುವೆ ಕುಸಿದಿದೆ. ಪರಿಣಾಮ ರೈಲಿನ ಎಸ್1 ಬೋಗಿಯಿಂದ ಎಸ್11 ವರೆಗಿನ ಸ್ಲೀಪರ್ ಬೋಗಿಗಳು ಬೋಗಿಗಳು ನದಿಗೆ ಉರುಳಿವೆ. ಇದೇ ಸಮಯಕ್ಕೆ ಮತ್ತೊಂದು ಹಳಿಯಲ್ಲಿ ಬರುತ್ತಿದ್ದ ಜನತಾ ಎಕ್ಸ್‌ಪ್ರೆಸ್‍ ಹಳಿತಪ್ಪಿದ್ದರಿಂದ ನಾಲ್ಕು ಬೋಗಿಗಳು ನದಿಗೆ ಉರುಳಿ ಬಿದ್ದಿದೆ. 
 
ಮಳೆಯಿಂದಾಗಿ ರೈಲ್ವೆ ಹಳಿಗಳ ಮೇಲೆ ಮೇಲೆ ಒಮ್ಮೆಲೆ ನೀರು ಹರಿದು ಬಂದ ಪರಿಣಾಮ ಈ ದುರಂತ ಸಂಭವಿಸಿದೆ ಎನ್ನಲಾಗುತ್ತಿದೆ.
 
ರೈಲ್ವೆ, ಎನ್‍ಡಿಆರ್‍ಎಫ್ ತಂಡ, ಸೇನೆ  ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಮತ್ತು ಕಾಳಿ ಮಚಕ್ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರೋದು ರಕ್ಷಣಾ ಕಾರ್ಯಕ್ಕೆ ತೊಡಕಾಗಿದೆ. 35 ರೈಲುಗಳ ಸಂಚಾರ ಮಾರ್ಗವನ್ನು ಬದಲಾಯಿಸಲಾಗಿದೆ.
 
ರೈಲು ಬೋಗಿಗಳು ನದಿಯಲ್ಲಿ ಮುಳುಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಈ ದುರಂತಕ್ಕೆ ಕಾಳಿ ಮಾಚಕ್ ನದಿಗೆ ಕಟ್ಟಲಾಗಿರುವ ಸೇತುವೆ ಹಳೆಯದಾಗಿದ್ದೇ ಕಾರಣ ಎಂದು ರೈಲ್ವೆ ಸಚಿವ ಸುರೇಶ್‍ಪ್ರಭು ತಿಳಿಸಿದ್ದಾರೆ. 

ದುರಂತದಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ರೈಲ್ವೆ ಇಲಾಖೆ ತಲಾ 2 ಲಕ್ಷ  ಮತ್ತು ಗಂಭೀರವಾಗಿ ಗಾಯಗೊಂಡವರಿಗೆ 50,000 ಪರಿಹಾರ ಧನವನ್ನು ಘೋಷಿಸಿದೆ.

ವೆಬ್ದುನಿಯಾವನ್ನು ಓದಿ