ಉಗ್ರರ ದಾಳಿ, ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾರತ ಸುರಕ್ಷಿತವಾಗಿರಲಿದೆಯೇ: ಮೋದಿಗೆ ಶಿವಸೇನೆ ಪ್ರಶ್ನೆ

ಮಂಗಳವಾರ, 23 ಫೆಬ್ರವರಿ 2016 (19:03 IST)
ದೇಶದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ದಾಳಿಗಳು ಮತ್ತು ದೇಶವಿರೋಧಿ ಚಟುವಟಿಕೆಗಳ ನಡುವೆ ಭಾರತ ಸ್ಥಿರವಾಗಿರಲಿದೆಯೇ ಎಂದು ಶಿವಸೇನೆ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದೆ.
 
ಕೇಂದ್ರ ಸರಕಾರವನ್ನು ಅಸ್ಥಿರಗೊಳಿಸಲು ಕೆಲ ವಿಚ್ಚಿದ್ರಕಾರಿ ಶಕ್ತಿಗಳು ಪ್ರಯತ್ನಿಸುತ್ತೇವೆ ಎಂದು ಮೋದಿ ಹೇಳಿಕೆ ನೀಡಿದ ಮಾರನೇ ದಿನವೇ ಶಿವಸೇನೆ ಹೇಳಿಕೆ ಹೊರಬಿದ್ದಿದೆ.
  
ದೇಶವಿರೋಧಿಗಳು ಜೆಎನ್‌ಯು ಕ್ಯಾಂಪಸ್‌ನಲ್ಲಿ ಉಗ್ರ ಅಫ್ಜಲ್ ಗುರು ಪರವಾಗಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ಇದೇ ಸಮಯದಲ್ಲಿ ಐಎಸ್‌ಐಎಸ್ ಬೆಂಬಲಿಗರು ಕಾಶ್ಮಿರದಲ್ಲಿ ಧ್ವಜ ಹಾರಿಸುತ್ತಿದ್ದಾರೆ. ಪಾಕಿಸ್ತಾನದಿಂದ ಎದುರಾಗುತ್ತಿರುವ ಅಪಾಯವನ್ನು ತಡೆಯುವಲ್ಲಿ ನಾವು ವಿಫಲವಾಗುತ್ತಿರುವುದರಿಂದ ದೇಶ ಸುರಕ್ಷಿತವಾಗಿಲ್ಲ ಎನ್ನುವ ಭಾವನೆ ಉಂಟಾಗುತ್ತಿದೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಪ್ರಕಟಿಸಿದೆ.
 
ಕಳೆದ ರವಿವಾರದಂದು ಓರಿಸ್ಸಾದ ಬಾರಗಾಢ್‌ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ವಿದೇಶಗಳಿಂದ ದೇಣಿಗೆ ಪಡೆಯುವ ಎನ್‌ಜಿಓಗಳು ಮತ್ತು ಕಾಳಸಂತೆಕೋರರು ತಮಗೆ ಕೆಟ್ಟ ಹೆಸರು ತಂದು ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
 
ಎನ್‌ಡಿಎ ಸರಕಾರವನ್ನು ಅಸ್ಥಿರಗೊಳಿಸುವ ಷಡ್ಯಂತ್ರಗಳು ನಡೆಯುತ್ತಿವೆ ಎಂದು ಮೋದಿ ಆರೋಪಿಸಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಬಗ್ಗೆ ಮಾತನಾಡಿದ್ದಕ್ಕೆ ಸಂತೋಷವಾಗಿದೆ. ಆದರೆ, ಪ್ರಸ್ತುತ ನಡೆಯುತ್ತಿರುವ ಘಟನೆಗಳು ನೋಡಿದಲ್ಲಿ ದೇಶ ಸ್ಥಿರವಾಗಿರಲಿದೆಯೇ ಎನ್ನುವ ಆತಂಕ ಕಾಡುತ್ತಿದೆ. ಸರಕಾರಗಳು ಬರುತ್ತವೆ, ಹೋಗುತ್ತವೆ ಆದರೆ, ದೇಶ ಸ್ಥಿರವಾಗಿರಬೇಕು ಎಂದು ಶಿವಸೇನೆ ಗುಡುಗಿದೆ.

ವೆಬ್ದುನಿಯಾವನ್ನು ಓದಿ