ಆಸಾರಾಮ್ ಪ್ರಕರಣ: ಪೊಲೀಸ್ ಭದ್ರತೆ ಕೋರಿ ಕೋರ್ಟ್‌ಗೆ ಸಾಕ್ಷಿದಾರಳ ಮನವಿ

ಗುರುವಾರ, 2 ಜುಲೈ 2015 (16:30 IST)
ಸ್ವಯಂಘೋಷಿತ ದೇವಮಾನವ ಆಸಾರಾಮ್ ಬಾಪು ಪ್ರಕರಣದಲ್ಲಿ ಸಾಕ್ಷಿಗಳ ಮೇಲೆ ನಡೆಯುತ್ತಿರುವ ಹಲ್ಲೆಗಳಿಂದಾಗಿ ಆತಂಕಗೊಂಡಿರುವ ಸಾಕ್ಷಿದಾರರು ಪೊಲೀಸ್ ಭದ್ರತೆ ನೀಡುವಂತೆ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ. 
 
ಆಸಾರಾಮ್ ಪ್ರಕರಣದಲ್ಲಿ ಸಾಕ್ಷಿಯಾಗಿರುವ ಸುಧಾ ಬಾಹಿನ್ ಪರ ವಕೀಲರಾದ ಪ್ರಮೋದ್ ವರ್ಮಾ ನ್ಯಾಯಾಲಯದಲ್ಲಿ ವಾದ ಮಂಡಿಸಿ, ತಮ್ಮ ಕಕ್ಷಿದಾರರಿಗೆ ಭದ್ರತೆ ನೀಡುವಂತೆ ಕೋರಿದರು. ನ್ಯಾಯಮೂರ್ತಿಗಳು ಜೋಧಪುರ್ ಪೊಲೀಸ್ ಆಯುಕ್ತರಿಗೆ ಸಾಕ್ಷಿದಾರರಿಗೆ ಮನೆಯಿಂದ ಕೋರ್ಟ್‌ಗೆ ಬರುವಾಗ ಮತ್ತು ಹೋಗುವಾಗ ಸಂಪೂರ್ಣ ಭದ್ರತೆ ನೀಡುವಂತೆ ನಿರ್ದೇಶನ ನೀಡಿದ್ದಾರೆ. 
 
ಬುಧವಾರದಂದು ಸಾಕ್ಷಿದಾರಳಾಗಿದ್ದ ಸುಧಾ ಬಾಹಿನ್ ಅವರಿಗೆ ಕೋರ್ಟ್‌ಗೆ ಹಾಜರಾಗಲು ಸಮನ್ಸ್ ಜಾರಿ ಮಾಡಲಾಗಿತ್ತು. ಆದರೆ, ಕೋರ್ಟ್‌ಗೆ ಪತ್ರ ಬರೆದ ಅವರು, ಆಸಾರಾಮ್ ಬೆಂಬಲಿಗರು ನನ್ನ ಮೇಲೆ ಹಲ್ಲೆ ನಡೆಸುವ ಸಾಧ್ಯತೆಗಳಿರುವುದರಿಂದ ಭದ್ರತೆ ನೀಡಿದಲ್ಲಿ ಮಾತ್ರ ಕೋರ್ಟ್‌ಗೆ ಬರುವುದಾಗಿ ತಿಳಿಸಿದ್ದರು ಎನ್ನಲಾಗಿದೆ.  
 
ಆಶ್ರಮದಲ್ಲಿ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದ ಕೆಲವರು ಆಸಾರಾಮ್ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಾಗಿದ್ದಾರೆ. ಸುಧಾ ಬಾಹಿನ್ ಕೂಡಾ ಆಶ್ರಮದಲ್ಲಿ ಸೇವಕಿಯಾಗಿ ಸೇವೆ ಸಲ್ಲಿಸಿದ್ದು, ಇದೀಗ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದಾರೆ. 
 

ವೆಬ್ದುನಿಯಾವನ್ನು ಓದಿ