ವಾಟ್ಸ್‌ಪ್, ಫೇಸ್‌ಬುಕ್ ವ್ಯಾಮೋಹ ತಂತು ಮಹಿಳೆಗೆ ವಿಚ್ಚೇದನದ ಕುತ್ತು

ಸೋಮವಾರ, 19 ಮೇ 2014 (13:15 IST)
ಪ್ರತಿನಿತ್ಯ ವಾಟ್ಸ್‌ಪ್ , ಫೇಸ್‌ಬುಕ್ ಮತ್ತು ಟ್ವಿಟ್ಟರ್‌ ಲೋಕದಲ್ಲಿ ತೇಲುತ್ತಿದ್ದ ಪತ್ನಿ ಅನೈತಿಕ ಸಂಬಂಧ ಹೊಂದಿರಬಹುದು ಎಂದು ಶಂಕಿಸಿ ಪತಿ ಮಹಾಶಯ ಪತ್ನಿಯೊಂದಿಗೆ ವಿಚ್ಚೇದನ ಬಯಸಿ ಕೌಟಂಬಿಕ ನ್ಯಾಯಾಲಯದ ಮೊರೆಹೋಗಿದ್ದಾನೆ.
 
ಆಗ್ರಾ ನಗರದಲ್ಲಿರುವ ಪೊಲೀಸ್ ಠಾಣೆಯಲ್ಲಿ ಪತಿ ಮಹಾಶಯ ರವಿವಾರದಂದು ದೂರನ್ನು ದಾಖಲಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
 ಕಳೆದ ಎರಡು ವರ್ಷಗಳ ಹಿಂದೆ ದಂಪತಿಗಳು ಪರಸ್ಪರ ಭೇಟಿಯಾಗಿದ್ದರು. ಸ್ನೇಹ ಪ್ರೀತಿಗೆ ತಿರುಗಿದಾಗ ವಿವಾಹವಾಗಲು ನಿರ್ಧರಿಸಿದರು. ವಿವಾಹವಾದ ಒಂದು ವರ್ಷದ ನಂತರ ದಂಪತಿಗಳಲ್ಲಿ ವೈಮನಸ್ಸು ಹೊಗೆಯಾಡಲು ಆರಂಭಿಸಿದೆ. 
 
ನನ್ನ ಪತ್ನಿ ವಾಟ್ಸ್‌ಪ್, ಫೇಸ್‌ಬುಕ್, ಟ್ವಿಟ್ಟರ್‌ನಲ್ಲಿರುವ ಗೆಳೆಯರೊಂದಿಗೆ  ಬೆಳಗಿನ ಜಾವ ಮೂರು ಗಂಟೆಯವರೆಗೆ ಚಾಟ್ ಮಾಡುತ್ತಿದ್ದಳು. ಒಂದು ವೇಳೆ ನಾನು ಆನ್‌ಲೈನ್‌ನಲ್ಲಿ ಬಂದಾಗ ಅವಳು ಆಫ್‌ಲೈನ್‌ಗೆ ಹೋಗುತ್ತಿದ್ದಳು ಎಂದು ಪತಿ ಆರೋಪಿಸಿದ್ದಾನೆ. 
 
ನಾನು ಆಕೆಯ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿ ನನ್ನ ತಂದೆ ತಾಯಿಯೊಂದಿಗೆ ಕೂಡಾ ಮಾತನಾಡುವುದನ್ನು ನಿಲ್ಲಿಸಿದ್ದಳು ಎಂದು ಪತಿ ಅಸಮಾಧಾನ ವ್ಯಕ್ತಪಡಿಸಿದ್ದಾನೆ.
 
ಏತನ್ಮಧ್ಯೆ, ತನ್ನ ಪತಿ ಮತ್ತು ಅತ್ತೆ ಮಾವ ಕೂಡಾ ಸಂಶಯ ಪಿಶಾಚಿಗಳಾಗಿರುವುದರಿಂದ ಅವರೊಂದಿಗೆ ಬಾಳಲು ಸಾಧ್ಯವಿಲ್ಲ. ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದ್ದೇನೆ ಎಂದು ಪತ್ನಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.
 
 

ವೆಬ್ದುನಿಯಾವನ್ನು ಓದಿ