ತೂಕ ಇಳಿಸಲು ಹೋಗಿ ಜೀವತೆತ್ತ ಮಹಿಳೆ

ಭಾನುವಾರ, 14 ಸೆಪ್ಟಂಬರ್ 2014 (13:35 IST)
ತೂಕ ಇಳಿಸುವ ಮಾತ್ರೆಗಳನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಸ್ವೀಕರಿಸಿದ 30 ವರ್ಷದ ಮಹಿಳೆಯೊಬ್ಬಳು, ಅಸ್ವಸ್ಥಗೊಂಡು ದುರ್ಮರಣವನ್ನಪ್ಪಿದ ಘಟನೆ ಮಧ್ಯಪ್ರದೇಶದ ಚಿಂದಾವರ ಜಿಲ್ಲೆಯಲ್ಲಿ ವರದಿಯಾಗಿದೆ. 

ನೋಲಕ್ಪಾ ಎಂಬ ಹಳ್ಳಿಯ ನಿವಾಸಿ  ಸೀತಾ ನಾಗವಂಶಿ ಎಂಬಾಕೆಯೇ ಮೃತಪಟ್ಟ ದುರ್ದೈವಿಯಾಗಿದ್ದು, ಮಾತ್ರೆ ತೆಗೆದುಕೊಂಡ ತಕ್ಷಣ ಅಸ್ವಸ್ಥಳಾದ ಅವಳನ್ನು ಆಕೆಯ ಪರಿವಾರದವರು ಜಿಲ್ಲಾ ಆಸ್ಪತ್ರೆಗೆ ಸೇರಿಸಿದರಾದರೂ, ಸ್ವಲ್ಪ ಸಮಯದಲ್ಲೇ ಆಕೆ ಮರಣವನ್ನಪ್ಪಿದಾಳೆ ಎಂದು ವೈದ್ಯರು ಘೋಷಿಸಿದ್ದಾರೆ. 
 
ವೈದ್ಯರ ಪ್ರಕಾರ ಆಕೆ ಹೃದಯ ಸ್ತಂಭನವಾಗಿ ಕೊನೆಯುಸಿರೆಳೆದಿದ್ದಾಳೆ. ಆಕೆಯ ಸಾವಿನಿಂದ ಆಘಾತಗೊಂಡಿರುವ ಸಂಬಂಧಿಕರು ಯಾವ ಕಾರಣಕ್ಕೆ ಆಕೆ ಸಾವಿಗೀಡಾದಳು ಎಂದು ತಿಳಿಯುತ್ತಿಲ್ಲ ಎಂದಿದ್ದು, ತನಿಖೆ ನಡೆಸುವಂತೆ  ಪೋಲಿಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.
 
ಮೃತ ಮಹಿಳೆಯ ಮರಣೋತ್ತರ ಪರೀಕ್ಷೆಯನ್ನು ಕೈಗೊಳ್ಳಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.
 
ತಮ್ಮ ಸ್ಥೂಲಕಾಯದ ಕುರಿತು ಖಿನ್ನಳಾಗಿದ್ದ ಆಕೆ, ಕಳೆದ ಎರಡುವಾರಗಳಿಂದ ಕೊಬ್ಬು ಕರಗಿಸುವ ಮಾತ್ರೆಗಳನ್ನು ತಿನ್ನುತ್ತಿದ್ದಳು ಎಂದು ಆಕೆಯ ಪತಿ ವೈದ್ಯರಿಗೆ ಮಾಹಿತಿ ನೀಡಿದ್ದಾನೆ.
 
ಆಕೆಯ ಕುಟುಂಬದವರು ನೀಡಿರುವ ಮಾಹಿತಿಯ ಮೇರೆಗೆ ಹೆಸರು ಗೊತ್ತಾಗದ ಮಾತ್ರೆಗಳನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಸೇವಿಸಿದ್ದು ಆಕೆಯ ಸಾವಿಗೆ ಕಾರಣವಾಗಿದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಆರೋಗ್ಯಾಧಿಕಾರಿಯೊಬ್ಬರು ಹೇಳಿದ್ದಾರೆ.
 
ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ನಡೆಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ