ಚಿಂದಿ ಆಯುತ್ತ ಛಲ ಬಿಡದೆ ಓದಿ ನರ್ಸ್ ಆದಳು

ಶುಕ್ರವಾರ, 30 ಸೆಪ್ಟಂಬರ್ 2016 (15:23 IST)
ಹೆಸರು ಬಾನು, 30ರ ಆರಂಭದಲ್ಲಿರುವ ಆಕೆ ವೃತ್ತಿಯಲ್ಲಿ ನರ್ಸ್. ಆಕೆಯ ಬದುಕಿನ ಕಹಾನಿ ಎಲ್ಲ ಕಳೆದುಕೊಂಡಿದ್ದೇನೆ ಎಂದು ಕುಸಿದು ಬಿದ್ದವರನ್ನು ಎದ್ದು ನಿಲ್ಲಿಸುವಂತದ್ದು. ಕಡು ಬಡತನದ ಬದುಕಿನಿಂದ ಎದ್ದು ನಿಂತು ಸ್ವಾವಲಂಬಿ ಜೀವನವನ್ನು ನಡೆಸುತ್ತಿರುವ ಆಕೆ ಧೈರ್ಯ, ಆತ್ಮವಿಶ್ವಾಸ ಮತ್ತು ಛಲವಿದ್ದರೆ ಬಡತನ ಅಡ್ಡಿಯಾಗದು ಎಂದು ತೋರಿದಾಕೆ. ಈ ಯುವತಿಯ ಸ್ಪೂರ್ತಿದಾಯಕ ಕಥೆಯನ್ನು ನೀವು ಓದಿ..

 
ರವಿದಾಸ್ ನಗರದ ನಿವಾಸಿಯಾದ ಬಾನು ಶೇಕ್ ಸಫಿ ಕೇವಲ ಮೂರು ವರ್ಷದ ಪ್ರಾಯದಲ್ಲಿದ್ದಾಗ ತಂದೆಯನ್ನು ಕಳೆದುಕೊಂಡಿದ್ದಳು. ಜೀವನ ನಿರ್ವಹಣೆಗಾಗಿ ತನ್ನ ತಾಯಿ ಮತ್ತು 1.5 ವರ್ಷದ ಪುಟ್ಟ ತಂಗಿ ಕ್ಸಮಾ ಜತೆ ಆಕೆ ಚಿಂದಿ ಆಯುವ ಕೆಲಸಕ್ಕೆ ಹೋಗುತ್ತಿದ್ದಳು. 
 
ಅಕ್ಕತಂಗಿಯರಿಬ್ಬರು ಬಗಲಲ್ಲಿ ಗೋಣಿಚೀಲವನ್ನು ಹಾಕಿಕೊಂಡು ನಗರದ ಬೀದಿಗಳಲ್ಲಿ  ಓಡಾಡುತ್ತ ಕಸವನ್ನು ಆಯುತ್ತಿದ್ದರು. ದೊಡ್ಡವರಾಗುತ್ತಿದ್ದಂತೆ ಈ ಕೆಲಸವನ್ನು ಅವರು ಮುಂದುವರೆಸಿದರು. ಜತೆಗೆ ಶಾಲೆಗೆ ಹೋಗಲು ಪ್ರಾರಂಭಿಸಿದರು. 12ನೇ ತರಗತಿ ಮುಗಿಸಿದ ಬಳಿಕ ಸರ್ಕಾರಿ ಕಾಲೇಜಿನಲ್ಲಿ ಎಎನ್‌ಎಮ್ ಅಭ್ಯಸಿಸಿದರು.
 
ಮತ್ತೀಗ ಬಾನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾಳೆ. ಆಕೆಯ ತಂಗಿ ಅನಾರೋಗ್ಯ ಪೀಡಿತ ತಾಯಿಯ ಆರೈಕೆ ಮಾಡಿಕೊಂಡು ಮನೆಯಲ್ಲಿದ್ದಾಳೆ. 
 
ಬಾನುವಿನ ಜೀವನ ಹೋರಾಟದ ಕಥೆಯನ್ನು ಕೇಳಿ ಪ್ರಭಾವಿತನಾದ 'ವೈ' ಗ್ರಾಮದಲ್ಲಿ ಟೈಲರ್ ಆಗಿರುವ ಶಬ್ಬಿರ್ ಖಾನ್ ಆಕೆಯನ್ನು ವಿವಾಹವಾಗಲು ಮುಂದೆ ಬಂದಿದ್ದಾನೆ. ಇದೇ ಅಕ್ಟೋಬರ್ 2 ರಂದು ಅವರಿಬ್ಬರು ಮದುವೆಯಾಗುತ್ತಿದ್ದು ಸಾಮಾಜಿಕ ಕಾರ್ಯಕರ್ತರಾಗಿರುವ ಡಾಕ್ಟರ್ ಪ್ರಕಾಶ್ ನಂದುರ್ಕರ್ ಈ ವಿವಾಹವನ್ನು ಆಯೋಜಿಸಿದ್ದಾರೆ.
 
ಕೇಂದ್ರ ಗೃಹ ಸಹಾಯಕ ಸಚಿವ ಹನ್ಸರಾಜ್ ಅಹಿರ್, ಮಹಾರಾಷ್ಟ್ರ ಸಚಿವ ಮದನ್ ಯೆರವಾರ್ ಸೇರಿದಂತೆ ಅನೇಕ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ