ಮಹಿಳೆಯರು ಮನೆಗೆಲಸಕ್ಕಾಗಿ ಮಾತ್ರ ಸೀಮಿತಗೊಳ್ಳಲಿ ; ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್

ಸೋಮವಾರ, 22 ಫೆಬ್ರವರಿ 2016 (15:17 IST)
ಇಂಡಿಯಾದಲ್ಲಿ ರೇಪ್‌ಗಳು ನಡೆಯುತ್ತಿವೆಯೇ ಹೊರತು ಭಾರತ ದೇಶದಲ್ಲಲ್ಲ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ಇದೀಗ, ಸಾಮಾಜಿಕ ಸಿದ್ಧಾಂತದ ಒಪ್ಪಂದದಂತೆ ಮಹಿಳೆ ಮನೆಗೆಲಸ ಮಾಡಿಕೊಳ್ಳುವುದಕ್ಕೆ ಮಾತ್ರ ತನ್ನನ್ನು ತಾನು ಸೀಮಿತಗೊಳಿಸಿಕೊಳ್ಳಬೇಕು ಎಂದು ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.
   
ಸಾಮಾಜಿಕ ಸಿದ್ಧಾಂತದ ಪ್ರಕಾರ, ಪತಿ ಮತ್ತು ಪತ್ನಿ ಪರಸ್ಪರ ಒಪ್ಪಂದಕ್ಕೆ ಒಳಪಟ್ಟಿರುತ್ತಾರೆ. ಮಹಿಳೆಗೆ ನೀನು ಮನೆಗೆಲಸ ನೋಡಿಕೊಂಡು ನನ್ನನ್ನು ತೃಪ್ತಿಪಡಿಸು. ನೀನು ಒಪ್ಪಂದದಂತೆ ಕರ್ತವ್ಯಗಳನ್ನು ನಿರ್ವಹಿಸುವವರೆಗೆ ನಾನು ನಿನ್ನ ಅಗತ್ಯತೆಗಳನ್ನು ಪೂರೈಸಿ ನಿನ್ನನ್ನು ರಕ್ಷಿಸುತ್ತೇನೆ ಎನ್ನುವುದು ಪತಿಯ ಒಪ್ಪಂದ. ಒಂದು ವೇಳೆ, ಆಕೆ ಕರ್ತವ್ಯ ನಿರ್ಹವಣೆಯಲ್ಲಿ ವಿಫಲವಾದಲ್ಲಿ ಅವನು ಅವಳನ್ನು ತ್ಯಜಿಸುತ್ತಾನೆ. ಅದರಂತೆ, ಪತಿ ಒಂದು ವೇಳೆ, ಸಾಮಾಜಿಕ ಸಿದ್ಧಾಂತವನ್ನು ಮುರಿದಲ್ಲಿ ಪತ್ನಿ, ಪತಿಯನ್ನು ತ್ಯಜಿಸಿ ಬೇರೆ ಪತಿಯನ್ನು ಅರಸಿ ಹೋಗಬಹುದಾಗಿದೆ ಎಂದು ಹೇಳಿದ್ದಾರೆ.  
 
ಮಧ್ಯಪ್ರದೇಶದ ಇಂದೋರ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರ ಸಭೆಯಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮಾತನಾಡುತ್ತಿದ್ದರು.
 
ಮೋಹನ್ ಬಾಗವತ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಿಪಿಐ ನಾಯಕಿ ಬೃಂದಾ ಕಾರಟ್, ಭಾಗವತ್ ಹೇಳಿಕೆಯಿಂದ ಆಶ್ಚರ್ಯವಾಗಿಲ್ಲ. ಯಾಕೆಂದರೆ, ಆರೆಸ್ಸೆಸ್ ನಿಜವಾದ ಬಣ್ಣ ಇದಾಗಿದೆ. ಮನುಸ್ಮೃತಿ ಆಧಾರದ ಮೇಲೆ ಹೊಸ ಭಾರತದ ಸಂವಿಧಾನ ರಚಿಸುವಂತೆ ಒತ್ತಡ ಹೇರಿದವರಿಂದ ಮತ್ತೇನು ನಿರೀಕ್ಷಿಸಲು ಸಾಧ್ಯ ಎಂದು ತಿರುಗೇಟು ನೀಡಿದ್ದಾರೆ. 
 
ಮೋಹನ್ ಭಾಗವತ್ ಹೇಳಿಕೆಯನ್ನು ಸಮರ್ಥಿಸಿಕೊಂಡ ಆರೆಸ್ಸೆಸ್, ಭಾರತೀಯ ಸಂಪ್ರದಾಯದ ಪ್ರಕಾರ ವೈವಾಹಿಕ ವ್ಯವಸ್ಥೆಯ ವಿರುದ್ಧ ಹೇಳಿಕೆ ನೀಡಿದ್ದಾರೆ ಎನ್ನುವ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ತಳ್ಳಿಹಾಕಿದೆ.

ವೆಬ್ದುನಿಯಾವನ್ನು ಓದಿ