ಮಹಿಳೆಯರಿಗೆ ಪಂಚಾಯಿತಿಗಳಲ್ಲಿ ಶೇ.50 ರಷ್ಟು ಮೀಸಲಾತಿಗೆ ಕೇಂದ್ರ ಚಿಂತನೆ: ಸಚಿವ

ಗುರುವಾರ, 4 ಫೆಬ್ರವರಿ 2016 (21:47 IST)
ಮುಂಬರುವ ಬಜೆಟ್ ಅಧಿವೇಶನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ಪಂಚಾಯಿತಿಗಳಲ್ಲಿ  ಮಹಿಳೆಯರ ಶೇ.33ರಷ್ಟು ಮೀಸಲಾತಿಯನ್ನು ಶೇ.50ಕ್ಕೆ ಏರಿಸಲಾಗುವುದು ಎಂದು ಕೇಂದ್ರ ಸಚಿವ ಬಿರೇಂದರ್ ಸಿಂಗ್ ಹೇಳಿದ್ದಾರೆ. 
 
ಈಗಾಗಲೇ ಕೆಲ ರಾಜ್ಯಗಳು ಪಂಚಾಯಿತಿಗಳಲ್ಲಿ ಶೇ.50 ರಷ್ಟು ಮೀಸಲಾತಿಯನ್ನು ನೀಡುತ್ತಿವೆ. ಆದರೆ, ಸಂವಿಧಾನಕ್ಕೆ ತಿದ್ದುಪಡಿ ತಂದು ದೇಶಾದ್ಯಂತ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ಜಾರಿಗೆ ತರಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಸಿಂಗ್ ಮಾಹಿತಿ ನೀಡಿದ್ದಾರೆ. 
 
ಪಂಚಾಯಿತಿ ಕಾರ್ಯಗಾರಕ್ಕಾಗಿ ಆಯೋಜಿಸಿದ ಸಮಾರಂಭದಲ್ಲಿ 10 ರಾಜ್ಯಗಳ ಸಚಿವರು ಉಪಸ್ಥಿತರಿದ್ದರು. ಕೇಂದ್ರ ಸರಕಾರದ ನಿರ್ಧಾರಕ್ಕೆ ಇತರ ಪಕ್ಷಗಳು ಬೆಂಬಲ ಸೂಚಿಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.  
 
ಪಂಚಾಯತ್ ರಾಜ್ ಕಾಯ್ದೆಗೆ ಸಂವಿಧಾನ ತಿದ್ದುಪಡಿ ತಂದು ಮಹಿಳೆಯರಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು ಎನ್ನುವುದು ಕೇಂದ್ರ ಸರಕಾರದ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ. 
 
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬೇರುಮಟ್ಟದಿಂದ ಸಶಕ್ತಗೊಳಿಸಲು ಮತ್ತು ಮಹಿಳೆಯರಿಗೆ ಹೆಚ್ಚಿನ ಉದ್ಯೋಗವಕಾಶ ಒದಗಿಸಲು ಪ್ರಧಾನಿ ಮೋದಿ ಸರಕಾರ ಬದ್ಧವಾಗಿದೆ ಎಂದು ಕೇಂದ್ರ ಸಚಿವ ಬಿರೇಂದರ್ ಸಿಂಗ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ