ಭಾರತದ ನೆಲದಲ್ಲಿ ಪಾಕ್ ಪರ ಘೋಷಣೆಗಳನ್ನು ಸಹಿಸುವುದಿಲ್ಲ: ರಾಜನಾಥ್ ಸಿಂಗ್ ವಾರ್ನಿಂಗ್

ಮಂಗಳವಾರ, 26 ಮೇ 2015 (18:27 IST)
ಜಮ್ಮು ಕಾಶ್ಮಿರದಲ್ಲಿ ಜಾರಿಯಲ್ಲಿರುವ 370ನೇ ಕಾಯ್ದೆ ಕುರಿತಂತೆ ಬಿಜೆಪಿ ನಿಲುವು ಸ್ಪಷ್ಟಪಡಿಸಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಭಾರತದ ನೆಲದಲ್ಲಿ ಪಾಕ್ ಪರ ಘೋಷಣೆಗಳನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು. 
 
ಜಮ್ಮು ಕಾಶ್ಮಿರ ರಾಜ್ಯಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನದ 370ನೇ ವಿಧಿಯನ್ನು ರದ್ದುಗೊಳಿಸಬೇಕು ಎಂದು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಒತ್ತಾಯಿಸುತ್ತಾ ಬಂದಿದೆ. ನಮ್ಮ ನಿಲುವಿನಲ್ಲಿ ಇಂದಿಗೂ ಯಾವುದೇ ಬದಲಾವಣೆಯಿಲ್ಲ ಎಂದು ಸಿಂಗ್ ಸ್ಪಷ್ಟಪಡಿಸಿದ್ದಾರೆ.
 
ಆದರೆ, ಜಮ್ಮು ಕಾಶ್ಮಿರದಲ್ಲಿ ಹೊಸದಾಗಿ ಸರಕಾರ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಮೊದಲ ಬಾರಿಗೆ ಸರಕಾರದಲ್ಲಿ ಭಾಗಿಯಾಗಿದೆ. ಮೊದಲು ರಾಜ್ಯದ ಅಭಿವೃದ್ಧಿಪರ ಚಿಂತನೆ ನಡೆಯಲಿ ಎಂದು ಹೇಳಿದ್ದಾರೆ.
 
ದೇಶದ ಸಾಮಾನ್ಯ ಜನರ ಆಶೋತ್ತರಗಳನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ದಿನಗಳಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
 
ಕಾಶ್ಮಿರದಲ್ಲಿ ಪ್ರತ್ಯೇಕತಾವಾದಿಗಳು ಪಾಕಿಸ್ತಾನದ ಧ್ವಜ ಹಾರಿಸುತ್ತಿರುವ ಕುರಿತಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಭಾರತದ ನೆಲದಲ್ಲಿ ಪಾಕ್ ಪರ ಘೋಷಣೆಗಳನ್ನು ಸಹಿಸುವುದಿಲ್ಲ. ಅಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
 
ದೇಶದಲ್ಲಿರುವ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಯಾವುದೇ ಸಮುದಾಯದವರಾಗಿರಲಿ ಎಲ್ಲರೂ ಭಾರತೀಯರೇ ಎಂದು ಬಿಜೆಪಿ ನಂಬುತ್ತದೆ. ಒಂದು ವೇಳೆ ಯಾವುದೇ ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗಿರಲಿ ಭಾರತದ ನೆಲದಲ್ಲಿ ನಿಂತು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವುದನ್ನು ಸರಕಾರ ಸಹಿಸುವುದಿಲ್ಲ ಎಂದರು. 

ವೆಬ್ದುನಿಯಾವನ್ನು ಓದಿ