ಯಾಕೂಬ್‌ಗೆ ಗಲ್ಲು: ಪರಿಣಾಮ ಘೋರವಾಗಿರುತ್ತದೆ ಎಂದ ಛೋಟಾ ಶಕೀಲ್

ಶುಕ್ರವಾರ, 31 ಜುಲೈ 2015 (12:45 IST)
1993ರ ಮುಂಬೈ ಸರಣಿ ಸ್ಫೋಟದ ಅಪರಾಧಿ, ಉಗ್ರ ಯಾಕುಬ್ ಮೆಮನ್‌ಗೆ ನಿನ್ನೆ ಗಲ್ಲು ಶಿಕ್ಷೆ  ನೀಡಿರುವುದಕ್ಕೆ ಸೇಡು ತೀರಿಸಿಕೊಳ್ಳುವುದಾಗಿ ಮುಂಬೈ ಸರಣಿ ಸ್ಪೋಟದ ಮತ್ತೊಬ್ಬ ಪ್ರಮುಖ ಆರೋಪಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಲಗೈ ಬಂಟ ಛೋಟಾ ಶಕೀಲ್ ಬೆದರಿಕೆ ಹಾಕಿದ್ದಾನೆ.

ರಾಷ್ಟ್ರೀಯ ಸುದ್ದಿ ಪತ್ರಿಕೆಯೊಂದಕ್ಕೆ ದೂರವಾಣಿ ಕರೆ ಮಾಡಿದ ಶಕೀಲ್ ಈ ಕೃತ್ಯದ ಪರಿಣಾಮ ಬಹಳ ಕೆಟ್ಟದಾಗಿರುತ್ತದೆ ಎಂದು ಭಾರತಕ್ಕೆ ಎಚ್ಚರಿಕೆ ನೀಡಿದ್ದಾನೆ.
 
"ಭಾರತಕ್ಕೆ ಹಿಂತಿರುಗಿ ಶರಣಾದರೆ ಶಿಕ್ಷೆ ಪ್ರಮಾಣ ಕಡಿಮೆಯಾಗಿರುತ್ತದೆ ಎಂದು ಯಾಕೂಬ್‌ನನ್ನು ಸುಳ್ಳು ಭರವಸೆ ನೀಡಿ ಪುಸಲಾಯಿಸಿದ್ದ ಭಾರತ ಸರ್ಕಾರ ಈಗ ವಂಚನೆ ಮಾಡಿದೆ. ಅಮಾಯಕನನ್ನು ಗಲ್ಲಿಗೇರಿಸಿದೆ", ಎಂದು ಶಕೀಲ್ ಆಕ್ರೋಶ ವ್ಯಕ್ತ ಪಡಿಸಿದ್ದಾನೆ.
 
"ದಾವೂದ್ ಶರಣಾದರೂ ಆತನಿಗೂ ಇದೇ ಗತಿ ಎಂಬುದು ಈಗ  ಸ್ಪಷ್ಟವಾಗಿದೆ. ದಾವೂದ್ ಆಗಲಿ ಅಥವಾ ಇತರೆ ಪರಾರಿಯಾಗಿರುವ ಆರೋಪಿಗಳು ಯಾವುದೇ ಕಾರಣಕ್ಕೂ ಇನ್ನು ಮೇಲೆ ಭಾರತಕ್ಕೆ ಮರಳುವುದಿಲ್ಲ. ಯಾಕೂಬ್‌ಗೆ ಗಲ್ಲು ನೀಡುವ ಮೂಲಕ  ಭಾರತ ಸರ್ಕಾರ ಯಾವ ಸಂದೇಶವನ್ನು ನೀಡಿದೆ? ಸಹೋದರ ಮಾಡಿದ ತಪ್ಪಿಗಾಗಿ ಅಮಾಯಕನಿಗೆ ನೀವು ಶಿಕ್ಷೆ ನೀಡಿದ್ದೀರಿ.  ಇದು ಇದು ಕಾನೂನಿನ ಕೊಲೆ. ಇದರ ಪರಿಣಾಮವನ್ನು ನೀವು ಅನುಭವಿಸಲೇ ಬೇಕು", ಎಂದು ಶಕೀಲ್ ಗುಡುಗಿದ್ದಾನೆ. 

ವೆಬ್ದುನಿಯಾವನ್ನು ಓದಿ