ಗಲ್ಲಿಗೇರುವ ಮುನ್ನ ಉಗ್ರ ಯಾಕೂಬ್ ಆಡಿದ ಕೊನೆಯ ಮಾತುಗಳಿವು

ಮಂಗಳವಾರ, 4 ಆಗಸ್ಟ್ 2015 (13:27 IST)
1993ರ ಮುಂಬೈ ಸರಣಿ ಸ್ಫೋಟದ ಆರೋಪಿ ಯಾಕೂಬ್ ಮೆಮನ್ ಮಗಳನ್ನು ನೋಡಬೇಕೆಂಬುದು ನನ್ನ ಕೊನೆಯಾಸೆ ಎಂದು ಹೇಳಿರುವ ಬಗ್ಗೆ ನಿಮಗೆ ತಿಳಿದಿರಲಿಕ್ಕೆ ಸಾಕು. ಆತ ಗಲ್ಲಿಗೇರುವ ಮುನ್ನ ಆಡಿದ್ದ ಕೊನೆಯ ಮಾತುಗಳೇನು ಗೊತ್ತೆ? ಮುಂದೆ ಓದಿ.

"ನನಗೆ ಮತ್ತು ನನ್ನ ದೇವರಿಗೆ ಮಾತ್ರ ಸತ್ಯ ಏನೆಂಬುದು ಗೊತ್ತು. ನೀವು ನಿಮ್ಮ  ಕರ್ತವ್ಯವನ್ನು ಮಾಡುತ್ತಿದ್ದೀರಿ. ಆದ್ದರಿಂದ ನಾನು ನಿಮ್ಮನ್ನು ಕ್ಷಮಿಸುತ್ತೇನೆ", 
ಸಾಯುವ ಮುನ್ನ ಯಾಕೂಬ್ ನಿರಾಳ ಭಾವದಲ್ಲಿ ಈ ರೀತಿಯಾಗಿ ಹೇಳಿದ ಎಂದು ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. ಯಾಕೂಬ್ ಕೊನೆಯ ಕ್ಷಣಗಳ ಕುರಿತು ಪತ್ರಿಕೆ ಪ್ರಕಟಿಸಿರುವ ಮಾಹಿತಿಗಳು ಈ ಮುಂದಿನಂತಿವೆ. 
 
ನಸುಕಿನ 5 ಗಂಟೆಗೆ ಜೈಲು ಅಧಿಕಾರಿಗಳು ಮಲಗಿದ್ದ ಯಾಕೂಬ್‍ನನ್ನು ಎಬ್ಬಿಸಿದರು. ನಿದ್ದೆಯಿಂದೆದ್ದು ಬಿಸಿ ನೀರ ಸ್ನಾನ ಮಾಡಿದ ನಂತರ ಯಾಕೂಬ್ ಜೈಲಿನ ಅಧಿಕಾರಿಗಳು ನೀಡಿದ ಹೊಸ ಬಟ್ಟೆ ಧರಿಸಿದ. ಒಂದು ಗ್ಲಾಸ್ ಟೀ ಕುಡಿದ ಆತ ತದನಂತರ ನಮಾಜ್ ಮಾಡಿದ. ಜೈಲಿನ ಕೊಠಡಿಯಿಂದ ಬೆಳಗಿನ ಜಾವ 6.50 ನಿಮಿಷಕ್ಕೆ ಆತನನ್ನು ಹೊರ ತರಲಾಯಿತು.
 
ಗಲ್ಲಿಗೇರಲು ತೆರಳುತ್ತಿರುವಾಗಲೂ ಯಾಕೂಬ್‍ ನಡುಗುತ್ತಿರಲಿಲ್ಲ. ಆತ ನಿರ್ವಿಕಾರ ಭಾವದಲ್ಲಿದ್ದ. ತನ್ನ ಜೀವನದ ಕೊನೆಯ ಕ್ಷಣವನ್ನು ಹೆಚ್ಚು ಗೌರವಯುತವಾಗಿ ಕಳೆಯಲು ಆತ ನಿರ್ಧರಿಸಿರಬೇಕು. ಆತನ ಮುಖಕ್ಕೆ ಕಪ್ಪು ಬಟ್ಟೆ ಹಾಕಲಾಗಿತ್ತು ಹಾಗೂ ಕೈಯನ್ನು ಹಿಂದಕ್ಕೆ ಕಟ್ಟಲಾಗಿತ್ತು. ಮೂವರು ಪೊಲೀಸ್ ಪೇದೆಗಳು ಆತನನ್ನು ನೇಣುಗಂಬದ ಕಡೆ ಕರೆದೊಯ್ದರು. 
 
ದಾರಿ ಮಧ್ಯೆ ಪೇದೆಯೊಬ್ಬ ‘ಚಪ್ಪಲಿ’ ಎಂದ. ಆತನ ಮಾತಿನ ಮರ್ಮವನ್ನು ಅರ್ಥ ಮಾಡಿಕೊಂಡ ಯಾಕೂಬ್, ‘ಹಾಂ ತೆಗೆಯುತ್ತೇನೆ’ ಎಂದು ಚಪ್ಪಲಿ ಬಿಚ್ಚಿಟ್ಟ ಮತ್ತು ನೇಣುಗಂಬದತ್ತ ಒಬ್ಬನೇ ನಡೆದು ಹೋದ. 
 
ಮುಂಜಾನೆ 7 ಗಂಟೆಗೆ ಸರಿಯಾಗಿ ಜೈಲು ಅಧೀಕ್ಷಕ ಯೋಗೇಶ್ ದೇಸಾಯಿ ಯಾಕೂಬ್ ಕಾಲಿನ ಕೆಳಗಿದ್ದ ಕಬ್ಬಿಣದ ಲಿವರ್‌ನ್ನು ಎಳೆದರು. ಅರ್ಧಗಂಟೆಯಾದ ಮೇಲೆ  ಯಾಕೂಬ್ ಮೃತದೇಹವನ್ನು ಕೆಳಗಿಳಿಸಲಾಯಿತು. ಪರೀಕ್ಷೆ ನಡೆಸಿದ ಕಾರಾಗೃಹದ ವೈದ್ಯರು ಯಾಕೂಬ್ ಮೃತಪಟ್ಟಿದ್ದನ್ನು ದೃಢಪಡಿಸಿದರು ಎಂದು ಪತ್ರಿಕೆಯಲ್ಲಿ ಬರೆಯಲಾಗಿದೆ. 
 
ನೇಣಿಗೇರುವ ಮುನ್ನ ಯಾಕೂಬ್ ಅಡ್ಡಿ ಪಡಿಸಬಹುದೆಂದು ಬಗೆದಿದ್ದ ಜೈಲಿನ ಅಧಿಕಾರಿಗಳು ಉಗ್ರ ಅಜ್ಮಲ್ ಕಸಬ್‍ನನ್ನು ಗಲ್ಲಿಗೇರಿಸುವ ಸಂದರ್ಭದಲ್ಲಿ ಹಾಜರಿದ್ದ ಪುಣೆ ಜೈಲಿನ ಪೇದೆಗಳನ್ನು ಕರೆಸಿದ್ದರು ಎಂದು ಮೂಲಗಳು ತಿಳಿಸಿವೆ ಎಂದು ಪತ್ರಿಕೆ ವರದಿ ಮಾಡಿದೆ. 

ವೆಬ್ದುನಿಯಾವನ್ನು ಓದಿ