ಯಮುನಾ ಎಕ್ಸ್‌ಪ್ರೆಸ್ ಹೆದ್ದಾರಿಯ ಮೇಲೆ ಲ್ಯಾಂಡ್ ಆದ ಯುದ್ಧವಿಮಾನ

ಗುರುವಾರ, 21 ಮೇ 2015 (17:33 IST)
165 ಕಿ.ಮೀ ಉದ್ದದ 6 ಲೇನ್ ಹೊಂದಿದ ಯಮುನಾ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಚಾಲನೆ ಮಾಡಲು ವಾಹನ ಸವಾರರಿಗೆ ತುಂಬಾ ಖುಷಿಯಾಗುತ್ತದೆ. ಮಿರೇಜ್ 2000 ಯುದ್ಧ ವಿಮಾನ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಹೆದ್ದಾರಿಯ ಮೇಲೆ ಲ್ಯಾಂಡ್‌ ಮಾಡುವಂತಹ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಯಿತು. 
 
ತುರ್ತು ಸಂದರ್ಭಗಳಲ್ಲಿ ಹಾರಾಡುತ್ತಿರುವ ವಿಮಾನಗಳನ್ನು ರಸ್ತೆಯಲ್ಲಿ ಇಳಿಸಲು ಸಾಧ್ಯವೇ ಎಂಬುದನ್ನು ಪರೀಕ್ಷಿಸುವ ಸಲುವಾಗಿ ಭಾರತೀಯ ವಾಯುಸೇನೆಯು ತನ್ನ ಮಿರಾಜ್‌ ವಿಮಾನವನ್ನು ಯಮುನಾ ಎಕ್ಸ್‌ಪ್ರೆಸ್‌ ವೇನಲ್ಲಿ ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ಸನ್ನು ಕಂಡಿದೆ. ಅಂದ ಹಾಗೆ ಭಾರತದಲ್ಲಿ ಇಂತಹ ಪ್ರಯೋಗ ನಡೆದಿರುವುದು ಇದೇ ಮೊದಲಾಗಿದ್ದು, ಪ್ರಥಮ ಪ್ರಯತ್ನದಲ್ಲಿಯೇ ಭಾರತೀಯ ವಾಯುಸೇನೆಗೆ ಜಯ ಲಭಿಸಿದಂತಾಗಿದೆ.
 
ವರದಿಗಳ ಪ್ರಕಾರ ಗುರುವಾರ ಬೆಳಿಗ್ಗೆ ಯುಮುನಾ ಎಕ್ಸ್‌ಪ್ರೆಸ್‌ ವೇನಲ್ಲಿ ಮಥುರಾಗೆ ಸಾಗುವ ಕಡೆ ವಿಮಾನವು ಎರಡು ಬಾರಿ ಇಳಿದಿದ್ದು ಇಲ್ಲಿಯೇ ಮೇ 25ರಂದು ಪ್ರದಾನಿ ಮೋದಿ ಅವರು ತಮ್ಮ ಸರಕಾರದ ಪ್ರಥಮ ವರ್ಷಾಚರಣೆ ಸಂಭ್ರಮದ ದೇಶವ್ಯಾಪಿ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ.
 
ಅನಿರೀಕ್ಷಿತವಾಗಿ ವಿಮಾನವು ಹೆದ್ದಾರಿಯಲ್ಲಿ ಇಳಿದ ಕಾರಣದಿಂದ ಈ ಭಾಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು. ಆದರೆ ಮತ್ತೂಂದು ಮೂಲಗಳ ಪ್ರಕಾರ ಪ್ರಾರಂಭದಲ್ಲಿ ರಸ್ತೆಗೆ ಮೆಲ್ಮಟ್ಟದಲ್ಲಿ ಹಾರಾಡಿದ ವಿಮಾನವು ಬಳಿಕ ಕೆಲವು ನಿಮಿಷಗಳವರೆಗೆ ಮಾತ್ರವೇ ರಸ್ತೆಯ ಮೇಲೆ ಇಳಿಯಿತು.
 
ಏನೇ ಆದರೂ, ಈ ಪ್ರಯೋಗವು ಭಾರತೀಯ ವಾಯು ಸೇನೆಗೆ ತುರ್ತು ಸಂದರ್ಭಗಳಲ್ಲಿ ರಸ್ತೆಯ ಮೇಲೆ ವಿಮಾನವನ್ನು ಇಳಿಸುವ ಪ್ರಯತ್ನಕ್ಕೆ ಹೊಸ ಶಕ್ತಿಯನ್ನು ನೀಡಿದಂತಾಗಿದೆ.
 

ವೆಬ್ದುನಿಯಾವನ್ನು ಓದಿ