ಮೋದಿ ಯಶಸ್ಸಿನ ಹಿಂದಿರುವ ಮೌನ ದೇವತೆ

ಶನಿವಾರ, 17 ಮೇ 2014 (13:29 IST)
ತಮ್ಮ ಯಶಸ್ಸಿನ ಹಿಂದೆ ಇಬ್ಬರು ಮಹಿಳೆಯರು ಇದ್ದಾರೆ ಎಂದು ಭಾವಿ ಪ್ರಧಾನಿ ಮೋದಿ ಸದಾ ಹೇಳುತ್ತಿರುತ್ತಾರೆ. ಅವರ ಮಾತಿನ ಪ್ರಕಾರ ತಮ್ಮ ಗೆಲುವಿಗೆ ಸ್ಪೂರ್ತಿಯಾಗಿ, ಕಾರಣವಾಗಿ ತಮ್ಮನ್ನು ಮುನ್ನಡೆಸಿದ್ದು ತಮ್ಮ ಹೆತ್ತ ತಾಯಿ ಮತ್ತು ಭಾರತ ಮಾತೆ. 
 
ಆದರೆ ಅತಿ ಚಿಕ್ಕ ವಯಸ್ಸಿನಲ್ಲಿ ಮೋದಿ ಬದುಕಲ್ಲಿ  ಜೀವನ ಸಂಗಾತಿಯಾಗಿ ಬಂದು, ಕೇವಲ 3 ತಿಂಗಳ ಸಾಂಸಾರಿಕ ಜೀವನದ ತರುವಾಯ ತಮ್ಮಿಂದ ದೂರವಾದ  ಪತಿ ನರೇಂದ್ರ ಮೋದಿ ನೆನಪಿನಲ್ಲಿ  4 ದಶಕಗಳನ್ನು ಕಳೆದಿರುವ ಜಶೋಧಾ ಬೆನ್ ಹರಕೆ ಹಾರಕೈ ಮೋದಿ ಬೆನ್ನ ಹಿಂದಿದೆ ಎನ್ನುವುದು ಕೂಡ ತೆರೆಮರೆಯ ಸತ್ಯ. 
 
ಹೌದು ಜಶೋಧಾ ಬೆನ್ ಇಂದಿಗೂ ಮೋದಿ ನೆನಪಲ್ಲಿ ನಿವೃತ್ತ ಜೀವನ ನಡೆಸುತ್ತಿರುವ ಒಂಟಿ ಜೀವ. ಪುಟ್ಟ ಬಾಲಕಿಯಾಗಿದ್ದಾಗ ಮೋದಿ ಕೈ ಹಿಡಿದು, ಸಂಸಾರದಲ್ಲಿ ಆಸಕ್ತಿ ಇಲ್ಲ ಎಂದು ನಯವಾಗಿ ತನ್ನನ್ನು ಒಪ್ಪಿಸಿ, ತೊರೆದು ಹೋದ ಪತಿಯ ಬಗ್ಗೆ ಆಕೆ ಒಂದು ದಿನವೂ ಆಕ್ರೋಶ ಪ್ರಕಟಿಸಿದವಳಲ್ಲ. ಬದುಕಿಡಿ ಜತೆಗೆ ಪಯಣ ಮಾಡುತ್ತಾನೆ ಎಂದು ಬಗೆದು ಸಪ್ತಪದಿ ತುಳಿದು, 3 ಗಂಟು ಬಿಗಿದ ಪತಿ 3 ತಿಂಗಳಲ್ಲಿ ಮರೆತು ಬಿಡು ಎಂದಾಗ ಮೌನವಾಗಿ ಮನೆ ಬಿಟ್ಟಿದ್ದಳಾಕೆ. 
 
ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತ ಕಾಲ ಕಳೆದ ಆಕೆ ಇಲ್ಲಿಯವರೆಗೆ ಪುಟ್ಟ ಕೋಣೆಯ ಮನೆಯಲ್ಲಿ ಒಂಟಿಯಾಗಿ ಜೀವನ ಸವೆಸಿದರು. ಮೋದಿ ಗುಜರಾತ್ ಮುಖ್ಯಮಂತ್ರಿ ಪದವಿಗೇರಿದರೂ ಆಕೆ ಆತ ನನ್ನ ಪತಿ ಎಂದು ಯಾರ ಬಳಿಯೂ ಬಹಿರಂಗ ಪಡಿಸಲಿಲ್ಲ. 
 
ಕಳೆದ ಎಲ್ಲ ವಿಧಾನಸಭಾ ಚುನಾವಣೆಗಳಲ್ಲಿ ನಾಮಪತ್ರ ಸಲ್ಲಿಸುವಾಗ ವೈವಾಹಿಕ ಸ್ಥಿತಿಯನ್ನು ಕೇಳುವ ಕಾಲಂನ್ನು ಖಾಲಿ ಬಿಡುತ್ತಿದ್ದ ಮೋದಿ, ಈ  ಬಾರಿ ತಾವು ಪ್ರಧಾನಿಯಾಗುವುದು ಬಹುತೇಕ ನಿಶ್ಚಯವಾಗಿದ್ದರಿಂದ , ಗೆದ್ದ ನಂತರ ಯಾವುದೇ ಸಮಸ್ಯೆಗಳನ್ನು ತಲೆ ಮೇಲೆ ಎಳೆದುಕೊಳ್ಳಲು ತಯಾರಾಗಿರಲಿಲ್ಲ ಎಂದು ಅನ್ನಿಸುತ್ತದೆ. ಹಾಗಾಗಿ ನಾಮಪತ್ರದಲ್ಲಿ ತಾವು ವಿವಾಹಿತರೆಂದು ಮತ್ತು ತಮ್ಮ ಹೆಂಡತಿಯ ಹೆಸರು ಯಶೋಧಾ ಬೆನ್ ಎಂದು ನಮೂದಿಸಿದರು. 
 
ಇಲ್ಲಿಯವರೆಗೆ ಮೋದಿ ಅವಿವಾಹಿತರೆಂದು ಬಗೆದಿದ್ದ ದೇಶದ ಜನರಿಗೆ ಮೋದಿ ವಿವಾಹಿತರೆಂದು ತಿಳಿದ್ದಿದ್ದು ಕಳೆದ ತಿಂಗಳಷ್ಟೇ. ಅದನ್ನು ಕೇಳಿ ವಿರೋಧ ಪಕ್ಷಗಳು ಸಿಕ್ಕಿದ್ದೇ ಅವಕಾಶ ಎಂದು ಮೋದಿಯ ವೈವಾಹಿಕ ಸ್ಥಿತಿಯ ಬಗ್ಗೆ ನಿಲ್ಲದ ಟೀಕೆಗಳ ಸುರಿಮಳೆಯನ್ನೇ ಸುರಿಸಿದರು. 
 
ಮಾಧ್ಯಮದವರಂತೂ ಯಶೋದಾ ಬೆನ್ ಹುಡುಕಿಕೊಂಡು ಹೊರಟರು. ಆದರೆ ಆ ಸಹನಾ ಮೂರ್ತಿ ತಾಯಿ ತಮ್ಮಿಂದ ಮೋದಿಗೆ ಸಮಸ್ಯೆಯಾಗುವುದನ್ನು ಬಯಸದೆ ಯಾರ ಕಣ್ಣಿಗೂ ಬೀಳದೆ ಅಜ್ಞಾತವಾಗಿ ಉಳಿದರು. ನಂತರ ಅವರು ಕಾಣಿಸಿಕೊಂಡಿದ್ದು ಮತದಾನದ ದಿನದಂದೇ.
 
ಮೋದಿ ಪ್ರಧಾನಿಯಾಗಲಿ ಎಂದು ಹರಕೆ ಹೊತ್ತು, ಪುಣ್ಯಕ್ಷೇತ್ರಗಳ ದರ್ಶನವನ್ನು ಮಾಡುತ್ತ ಕಾಲ ಕಳೆದ ಬೆನ್ ಈಗಲೂ ಕೇವಲ ಅನ್ನದ ಆಹಾರವನ್ನಷ್ಟೇ ತಿನ್ನುತ್ತ ವೃತನಿಷ್ಠರಾಗಿದ್ದಾರೆ. ಇಷ್ಟು ಕಾಲ ಮೋದಿಯಿಂದ ಮರೆಯಾಗಿ ಕಳೆದ ಬೆನ್ ಈಗಲೂ ತಮ್ಮ ಪತಿ ಮರಳಿ ತಮ್ಮನ್ನು ಸ್ವೀಕರಿಸುತ್ತಾರೆ ಎಂದು ಆಸೆ ಹೊತ್ತಿದ್ದಾರಂತೆ. 
 
ಈಗ ಅವರಿಗಿರುವ ಪುಟ್ಟ ಆಸೆ ಒಂದೇ ಅಂತೆ!. ತಮ್ಮ ಪತಿಯ ಜತೆ ಗುಜರಾತಿನ ಪ್ರಸಿದ್ಧ ಶಕ್ತಿಪೀಠ ಅಂಬಾ ದೇಗುಲಕ್ಕೆ ಭೇಟಿ ನೀಡಿ ತಾಯಿಯ ದರ್ಶನವನ್ನು ಮಾಡಿ ಪುನೀತಳಾಗುವುದು. ಆದರೆ ಮೋದಿ ಒಪ್ಪಿದರೆ ಮಾತ್ರ. 
 
ಅವರಾಸೆಗೆ ಮೋದಿ ಪ್ರತಿಕ್ರಿಯಿಸುತ್ತಾರಾ...? ಅದಕ್ಕೆ ಮೋದಿಯವರೇ ಉತ್ತರಿಸಬೇಕು....

ವೆಬ್ದುನಿಯಾವನ್ನು ಓದಿ