ನಿಮಗೆ ಇಷ್ಟ ಬಂದ ಡ್ರೆಸ್‌ಗಳನ್ನು ಧರಿಸಿ ಮುಕ್ತವಾಗಿ ಓಡಾಡಿ: ಗೋವಾ ಸಿಎಂ

ಬುಧವಾರ, 30 ಜುಲೈ 2014 (20:56 IST)
ಗೋವಾದಲ್ಲಿ ಜನರು ತಮಗೆ ಬೇಕಾದಂತಹ ಉಡುಗೆಗಳನ್ನು ಧರಿಸಬಹುದು, ಯಾರಿಗಾದರೂ ಜನರು ಧರಿಸಿರುವ ಉಡುಗೆ  ಆಕ್ಷೇಪಣಾರ್ಹವಾಗಿ  ಕಂಡು ಬಂದರೆ ಅಂತಹವರಿಗೆ ಪ್ರಕರಣ ದಾಖಲಿಸಲು ಅವಕಾಶವಿದೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್  ಅವರು ಬುಧವಾರ ವಿಧಾನಸಭೆಯಲ್ಲಿ ತಿಳಿಸಿದರು.
 
ಕಾಂಗ್ರೆಸ್‌ನ ಶಾಸಕರೊಬ್ಬರ ಪ್ರಶ್ನೆಗೆ ಉತ್ತರಿಸಿದ ಪರಿಕ್ಕರ್ ಅವರು ಈ ಮಾತನ್ನು ಹೇಳಿದರು.
 
ಮಹಿಳೆಯು ಧರಿಸಿದ ಉಡುಗೆಯ ಬಗ್ಗೆ ಯಾರಾದರೂ ಕಾನೂನನ್ನು ಕೈಗೆತ್ತಿಕೊಳ್ಳುವುದು ಮತ್ತು ಮಹಿಳೆಗೆ ಕಿರುಕುಳ ನೀಡುವುದನ್ನು ನಾನು ಸಹಿಸುವುದಿಲ್ಲ. ಒಂದು ವೇಳೆ ಯಾರಿಗಾದರೂ ಉಡುಗೆ ಅಸಭ್ಯ ವರ್ತನೆಗೆ ಕಾರಣವಾಗಬಹುದು ಎನ್ನುವಂತಿದ್ದರೆ ಪ್ರಕರಣ ದಾಖಲಿಸಬಹುದು. ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಆದರೆ ರಾಜ್ಯದಲ್ಲಿ ನೈತಿಕ ಪೊಲೀಸ್‌ಗಿರಿಯನ್ನು ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ’ ಎಂದು ಪರಿಕ್ಕರ್ ಹೇಳಿದರು.
 
ಹಿರಿಯ ಸಂಪುಟ ಸಚಿವ ಸುದಿನ್‌ ಧವಳೀಕರ್‌ ಅವರು ‘ಗೋವಾ ಕಡಲ ತೀರಗಳಲ್ಲಿ ಮಹಿಳೆಯರು ಬಿಕಿನಿ ಧರಿಸಿ ಓಡಾಡಬಾರದು. ಇದು ನಮ್ಮ ಸಂಸ್ಕೃತಿಗೆ ವಿರುದ್ಧ. ಇದರ ವಿರುದ್ಧ ನಿಷೇಧ ಹೇರಬೇಕು’ ಎಂದು ಜುಲೈ ತಿಂಗಳ ಮೊದಲ ವಾರದಲ್ಲಿ  ವಿವಾದಾತ್ಮಕ ಹೇಳಿಕೆ ನೀಡಿದ್ದರು.

ವೆಬ್ದುನಿಯಾವನ್ನು ಓದಿ