ಭಾರತದಲ್ಲಿ ಹೆಣ್ಣನ್ನು ಹುಟ್ಟಿಸಬೇಡ: ದೇವರಲ್ಲಿ ಐಎಎಸ್ ಅಧಿಕಾರಿಯ ಪ್ರಾರ್ಥನೆ

ಮಂಗಳವಾರ, 4 ಆಗಸ್ಟ್ 2015 (16:57 IST)
ಭಾರತದಲ್ಲಿ ಹೆಣ್ಣಾಗಿ ಯಾರನ್ನೂ ಹುಟ್ಟಿಸದಿರು ಎಂದು ದೇವರಲ್ಲಿ  ಪ್ರಾರ್ಥಿಸುತ್ತೇನೆ ಎಂದು ತರಬೇತಿ ನಿರತ ಮಹಿಳಾ ಐಎಎಸ್ ಅಧಿಕಾರಿ ರಿಜು ಬಫ್ನ ಪ್ರಕಟಿಸಿರುವ ಫೇಸ್‌ಬುಕ್ ಪೋಸ್ಟ್ ವೈರಲ್ ಆಗಿ ಹರಿದಾಡುತ್ತಿದ್ದು ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. 
 
ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗ್ಗೆ ರೋಸಿಹೋಗಿರುವ ರಿಜು ಬಫ್ನ  ಈ ರೀತಿಯ ಪೋಸ್ಟ್ ಮಾಡಿದ್ದಾರೆ. ಆದರೆ ತಾವು ಪೋಸ್ಟ್ ಮಾಡಿದ ನಾಲ್ಕು ಗಂಟೆಗಳ ಬಳಿಕ ಅವರು ಮತ್ತೊಂದು ಪೋಸ್ಟ್ ಪ್ರಕಟಿಸಿ ತಮ್ಮ ಹಿಂದಿನ ಹೇಳಿಕೆಗೆ ವಿಷಾದ ವ್ಯಕ್ತ ಪಡಿಸಿದ್ದಾರೆ. 
 
ತಮ್ಮ ಫೇಸ್‌ಬುಕ್ ಸ್ಟೇಟಸ್‌ನಲ್ಲಿ ಅವರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ  ತಮಗಾದ ಕೆಟ್ಟ ಅನುಭವವನ್ನು ಹೇಳಿಕೊಂಡಿದ್ದಾರೆ. ಮಧ್ಯಪ್ರದೇಶದ ಮಾನವ ಹಕ್ಕು ಆಯೋಗದ ಸದಸ್ಯ ಸಂತೋಷ್ ಚೌಧರಿ ವಿರುದ್ಧ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಾನೆ ಎಂಬ ಆರೋಪದ ಮೇಲೆ ಅವರು ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದರು.ಚೌಧರಿ ವಿರುದ್ಧ ಕ್ರಮ ಕೈಗೊಂಡ ಆಯೋಗ ಆತನನ್ನು ಅಮಾನತುಗೊಳಿಸಿತ್ತು.
 
'ಸ್ಥಳೀಯ ನ್ಯಾಯಾಲಯದಲ್ಲಿ ಈ ಕುರಿತು ವಿಚಾರಣೆಗೆ ಹಾಜರಾಗಿ ತಾವು ಹೇಳಿಕೆ ದಾಖಲಿಸುವ ವೇಳೆ ಪ್ರತಿವಾದಿ ವಕೀಲರು ತೀವ್ರ ಅನುಚಿತವಾಗಿ ನಡೆದುಕೊಂಡರು', ಎಂದು ಅವರು ವ್ಯವಸ್ಥೆಯ ವಿರುದ್ಧ ಕಿಡಿಕಾರಿದ್ದಾರೆ. 
 
"ಈ ದೇಶದಲ್ಲಿನ ಪ್ರತಿ ಮಹಿಳೆ ಪದೇ ಪದೇ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುತ್ತಿದ್ದಾಳೆ. ಆಕೆಗೆ ರಕ್ಷಣೆಯೇ ಇಲ್ಲದಂತಾಗಿದೆ. ಇದಕ್ಕೆಲ್ಲಾ ಕಡಿವಾಣ ಹಾಕಲು ಆಸಾಧ್ಯ ಎನ್ನಿಸಿರುವುದರಿಂದ ಇನ್ನೆಂದೂ ಈ ನೆಲದಲ್ಲಿ ಹೆಣ್ಣು ಮಕ್ಕಳನ್ನು ಹುಟ್ಟಿಸಬೇಡ’ ಎಂದು  ದೇವರಲ್ಲಿ ಪ್ರಾರ್ಥಿಸುತ್ತೇನೆ", ಎಂದು ಮಹಿಳಾ ಐಎಎಸ್ ಅಧಿಕಾರಿ ರಿಜು ಬಫ್ನ ನೋವಿನಿಂದ ಹೇಳಿಕೊಂಡಿದ್ದಾರೆ. 
 
"ಐಎಎಸ್ ಅಧಿಕಾರಿಯಾಗಿ ಉನ್ನತ ಸವಲತ್ತುಗಳನ್ನು ಹೊಂದಿರುವ ಮಹಿಳೆಯೇ ನ್ಯಾಯಾಲಯದಲ್ಲಿ ಉದಾಸೀನತೆ ಮತ್ತು ಸಂವೇದನಾಹೀನತೆಯನ್ನು ಎದುರಿಸುತ್ತಾಳೆ ಎಂದರೆ ನ್ಯಾಯ ಕೋರಿ ಬರುವ ಸಾಮಾನ್ಯ ಮಹಿಳೆಯರ ಅವಸ್ಥೆಯನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ," ಎಂದು ಅವರು ಖೇದ ವ್ಯಕ್ತ ಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ