ಕಲಾಂ ಸಾವಿನ ಆಘಾತ: ಆತ್ಮಹತ್ಯೆಗೆ ಶರಣಾದ ಯುವಕ

ಶನಿವಾರ, 1 ಆಗಸ್ಟ್ 2015 (12:31 IST)
ಮಾಜಿ ರಾಷ್ಟ್ರಪತಿ, ವಿಜ್ಞಾನಿ, ಮೆಚ್ಚಿನ ಅಬ್ದುಲ್‌ ಕಲಾಂ ನಿಧನದಿಂದ ಸಂಪೂರ್ಣ ದೇಶವೇ ಶೋಕದಲ್ಲಿ ಮುಳುಗಿದೆ. ಪುಟ್ಟ ಪುಟ್ಟ ಮಕ್ಕಳು ಸಹ ಊಟ- ತಿಂಡಿ ತ್ಯಜಿಸಿ ಅಳುತ್ತಿರುವ ವರದಿಗಳು ಸಹ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಆದರೆ ಚೆನ್ನೈನ ಯುವಕನೊಬ್ಬ ಕಲಾಂ ಅವರ ಅಗಲಿಕೆ ಸಹಿಸಲಾಗದೆ ಜೀವವನ್ನೇ ತೆಗೆದುಕೊಂಡಿದ್ದಾನೆ.

ಕಲಾಂ ಅವರ ಆಕಸ್ಮಿಕ ಸಾವಿನಿಂದ ಅತಿಯಾಗಿ ನೊಂದಿದ್ದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ರಾಜಧಾನಿ ಚೆನ್ನೈನ ಹೊರವಲಯದಲ್ಲಿ ನಡೆದಿದೆ.
 
ಆತ್ಮಹತ್ಯೆಗೆ ಶರಣಾದ ಯುವಕನನ್ನು ಮೂಲತಃ ತಿರುವಾರೂರು ಜಿಲ್ಲೆಯ ಸುಬ್ರಮಣಿ (27) ಎಂದು ಗುರುತಿಸಲಾಗಿದ್ದು ಪದವೀಧರನಾಗಿದ್ದ ಆತ ಚೆನ್ನೈನ ಕಂಪನಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದು ತಿರುಪೊರೂರುನಲ್ಲಿ ವಾಸವಾಗಿದ್ದ. ಕಲಾಂ ಅವರ ಅಭಿಮಾನಿಯಾಗಿದ್ದ ಆತ ಅವರ ನಿಧನದಿಂದ ತೀವ್ರವಾಗಿ ಖಿನ್ನತೆಗೆ ಒಳಗಾಗಿದ್ದ ಎಂದು ಹೇಳಲಾಗುತ್ತದೆ. 
 
ಕಲಾಂ ಅವರ ಅಂತ್ಯಕ್ರಿಯೆ ನೆರವೇರಿದ ಮರುದಿನವಾದ ಶುಕ್ರವಾರ ಆತ ಕೆಲಸಕ್ಕೆ ಸಹ ಹೋಗದೆ ನಿವಾಸದಲ್ಲಿಯೇ ಇದ್ದ. ಆತ ಮನೆಯಿಂದ ಹೊರಗೆ ಬರದೇ ಇರುವುದರಿಂದ ಅನುಮಾನಗೊಂಡ ನೆರೆಹೊರೆಯವರು ಬಾಗಿಲು ಬಡಿದಾಗ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಆತಂಕಿತರಾದ ಸ್ಥಳೀಯರು ಬಾಗಿಲು ಒಡೆದು ನೋಡಿದಾಗ ಸುಬ್ರಮಣಿ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ.
 
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. 
 
ಆತನ ಕೋಣೆಯಲ್ಲಿ ಡೆತ್ ನೋಟ್ ಕೂಡ ಸಿಕ್ಕಿದ್ದು, "ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಜೀವನ ಮೆಚ್ಚಿನ ಕಲಾಂಗೆ, ಸ್ನೇಹಿತರಿಗೆ, ದೇಶಕ್ಕೆ ಮುಡಿಪು. ಯುವಕರು, ವಿದ್ಯಾರ್ಥಿಗಳು ತಮ್ಮ ಬದುಕನ್ನು ಕಲಾಂ ಅವರ ಕನಸನ್ನು  ನನಸಾಗಿಸಲು ತಮ್ಮ ಜೀವನವನ್ನು ಮುಡಿಪಾಗಿಡಬೇಕು ಎಂಬುದು ನನ್ನ ಕೊನೆಯಾಸೆ", ಎಂದಾತ ಬರೆದಿದ್ದಾನೆ ಎಂದು ಆ ವಿಭಾಗದ ಪೊಲೀಸ್ ಠಾಣಾಧಿಕಾರಿ ಮುತ್ತು ಕುಮಾರ್ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ