'ಟೀ' ನೀಡಲು ವಿಳಂಬ ವಿವಾದ: ಯುವಕನ ಕೊಲೆಯಲ್ಲಿ ಅಂತ್ಯ

ಗುರುವಾರ, 28 ಆಗಸ್ಟ್ 2014 (08:58 IST)
ಟೀ ನೀಡಲು ವಿಳಂಬ ಮಾಡಿದ ಕಾರಣಕ್ಕೆ 20 ವರ್ಷದ ಯುವಕನೊಬ್ಬನ್ನು ಕೊಲೆ ಮಾಡಿದ ಘಟನೆ ಪೂರ್ವ ದೆಹಲಿಯ  ಜಪ್ರಾಬಾದ್ ಎಂಬಲ್ಲಿ ನಡೆದಿದ್ದು, ಘಟನೆಯಲ್ಲಿ ಮೃತನ ಸಹೋದರ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ

ಮೃತ ವ್ಯಕ್ತಿಯನ್ನು ವಾಸೀಮ್ ಎಂದು ಗುರುತಿಸಲಾಗಿದ್ದು, ದಾಳಿಯಲ್ಲಿ ಗಾಯಗೊಂಡಿರುವ ಆತನ ಸಹೋದರನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
 
ಸಹೋದರರು ತಮ್ಮ ಕುಟುಂಬ ಸ್ವಾಮ್ಯದ ಮುದ್ರಣ ವ್ಯವಹಾರದ ಅಂಗಡಿಯನ್ನು ನಡೆಸುತ್ತಿದ್ದು ಹತ್ತಿರದ ಅಂಗಡಿಯೊಂದರಿಂದ ಪ್ರತಿದಿನ  ಚಹಾವನ್ನು ತರಿಸಿಕೊಳ್ಳುತ್ತಿದ್ದರು. 
 
ಎಂದಿನಂತೆ  ಸಹೋದರರು ಟೀ  ತಂದುಕೊಡುವಂತೆ  ಪಕ್ಕದ ಅಂಗಡಿಯವರಲ್ಲಿ ಕೇಳಿದ್ದಾರೆ. ಆದರೆ ಸಮಯಕ್ಕೆ ಟೀ ತಲುಪದ ಕಾರಣ  ವಿಚಾರಿಸಲು ವಾಸೀಂ ಟೀ ಅಂಗಡಿಗೆ ತೆರಳಿದ್ದಾನೆ. ಆ ಸಮಯದಲ್ಲಿ ಟೀ ಶಾಪ್ ಮಾಲೀಕ ಹಬೀಬ್ ಅಪ್ರಿಯವಾದ ಮಾತುಗಳನ್ನಾಡಿದ್ದಾನೆ.  ಆತನ ಮಾತಿನಿಂದ ಅಸಮಾಧಾನಗೊಂಡ ವಾಸೀಂ ತನ್ನ  ಸಹೋದರನನ್ನು ಸ್ಥಳಕ್ಕೆ ಕರೆದಿದ್ದಾನೆ. ಎರಡು ಕಡೆಯವರ ನಡುವೆ ಪ್ರಾರಂಭವಾದ ವಾಗ್ವಾದ ಮಾರಾಮಾರಿಯಾಗಿ ಪರಿವರ್ತಿತವಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ. 
 
ಕೋಪದ ಆವೇಶದಲ್ಲಿ ತನ್ನ ಸಂಬಂಧಿಕರನ್ನು  ಹಬೀಬ್ ಸ್ಥಳಕ್ಕೆ ಕರೆಸಿದ. ಅವರು ಸಹೋದರರಿಬ್ಬರ ಮೇಲೆ ಚಾಕುವಿನಿಂದ  ದಾಳಿ ಮಾಡಿದರು. 
 
ದಾಳಿಯಲ್ಲಿ ವಾಸೀಂನ ಗಂಟಲು ಸೀಳಲ್ಪಟ್ಟರೆ, ಆತನ ಸಹೋದರನಿಗೆ ಗಂಭೀರ ಸ್ವರೂಪದ ಗಾಯಗಳಾದವು. 
 
ಅವರಿಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ತೀವೃ ಗಾಯಗಳಾಗಿದ್ದ ವಾಸೀಂ ಸಾವನ್ನಪ್ಪಿದ್ದು, ಆತನ ಸಹೋದರ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾನೆ.
 
ಆರೋಪಿ ಹಬೀಬ್ ಮತ್ತು ಆತನ ಸಂಬಂಧಿಕರನ್ನು ಬಂಧಿಸಿರುವ ಪೋಲಿಸರು ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ