ಈ ವಾರಾಂತ್ಯ ಬೆಂಗ್ಳೂರಲ್ಲಿ ರಂಜಿಸಲಿದ್ದಾರೆ 'ಅಮೆರಿಕನ್ನಡಿಗರು'

ಬುಧವಾರ, 6 ಜುಲೈ 2011 (20:05 IST)
WD
WD
ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರು ರಚಿಸಿಕೊಂಡಿರುವ ನಾರ್ಥ್ ಅಮೆರಿಕ ವಿಶ್ವ ಕನ್ನಡ ಅಸೋಸಿಯೇಷನ್ (ನಾವಿಕ) ವತಿಯಿಂದ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಜುಲೈ 9 ಮತ್ತು 10ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ವಿಶಿಷ್ಟ 'ಅಮೆರಿಕನ್ನಡೋತ್ಸವ' ನಡೆಯಲಿದೆ. ತಾಯ್ನೆಲದಲ್ಲಿ ಅಮೆರಿಕದ ಕನ್ನಡ ಕುಡಿಗಳ ಪ್ರತಿಭಾ ಪ್ರದರ್ಶನಕ್ಕೆ ಇದೊಂದು ಸೂಕ್ತ ವೇದಿಕೆಯಾಗಲಿದೆ.

ಜುಲೈ 9ರಂದು ಬೆಳಿಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಮೆರಿಕನ್ನಡೋತ್ಸವ ಉದ್ಘಾಟಿಸುವರು. ಬಳಿಕ ಅಂದು ಇಡೀ ದಿನ ಹಾಗೂ ರಾತ್ರಿ 9 ಗಂಟೆಯ ತನಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರ ಮಂಥನಗಳು ನಡೆಯಲಿವೆ. ಜುಲೈ 10ರಂದು ಬೆಳಿಗ್ಗೆ 9ರಿಂದ ರಾತ್ರಿ 9ರ ತನಕ ವಿವಿಧ ಸಾಂಸ್ಕೃತಿಕ, ಚಿಂತನೆ, ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.

"ನಾವು ವಿಶ್ವ ಕನ್ನಡಿಗರು" ಎಂಬ ಧ್ಯೇಯವಾಕ್ಯ "ನಾವಿಕ" ಸಂಘಟನೆಯದ್ದು.
WD
ಹೆಸರಿಗೆ ತಕ್ಕಂತೆ ನಾವಿಕದ ವತಿಯಿಂದ ಕಳೆದ ವರ್ಷ ಜುಲೈನಲ್ಲಿ ಲಾಸ್ ಏಂಜಲೀಸ್‌ನಲ್ಲಿ ಕನ್ನಡೋತ್ಸವ ನಡೆದಿತ್ತು. ಈ ಬಾರಿ ಅಮೆರಿಕದಲ್ಲಿ ಕನ್ನಡ ಮಾತನಾಡುವ, ಕನ್ನಡ ಕಲಿತಿರುವ ಅನಿವಾಸಿ ಭಾರತೀಯ ಮಕ್ಕಳು ಮತ್ತು ಹಿರಿಯರಿಂದ ತಾಯ್ನೆಲದಲ್ಲೇ ಪ್ರದರ್ಶನ ನೀಡುವಂತಾಗಬೇಕು, ಜತೆಗೆ ಕರ್ನಾಟಕ ಮತ್ತು ವಿದೇಶಗಳಲ್ಲಿರುವ ಕನ್ನಡಿಗರ ನಡುವೆ ಸ್ನೇಹಸೇತು ಬೆಸೆಯಬೇಕು ಎಂಬ ಉದ್ದೇಶದೊಂದಿಗೆ "ಅಮೆರಿಕನ್ನಡೋತ್ಸವ" ನಡೆಯಲಿದೆ ಎಂದು "ನಾವಿಕ"ದ ಅಧ್ಯಕ್ಷ ಕೇಶವ ಬಾಬು ಹೇಳುತ್ತಾರೆ.


ಅಮೆರಿಕದಲ್ಲಿ ಹುಟ್ಟಿ, ಬೆಳೆದ 300ರಿಂದ 500 ಮಂದಿ ಕಲಾವಿದರು, ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ಪ್ರಯತ್ನ ಮಾಡುವವರು ಇಲ್ಲಿ ಕಾರ್ಯಕ್ರಮ ನೀಡಲಿದ್ದಾರೆ. ಇದರಲ್ಲಿ 150ರಿಂದ 200 ರಷ್ಟು ಮಕ್ಕಳೇ ಇದ್ದಾರೆ. ಸಂಗೀತ, ನೃತ್ಯ, ಯಕ್ಷಗಾನ, ರೂಪಕ, ನಾಟಕ ಸಹಿತ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕಾಗಿಯೇ 2ರಿಂದ 2,500 ಮಂದಿ ಕನ್ನಡಿಗರು ಆಗಮಿಸುವ ನಿರೀಕ್ಷೆ ಇದೆ.

"ಕನ್ನಡ ಕಲಿಕೆ", "ಪ್ರತಿಭಾ ಅಮೆರಿಕ", "ವಾಣಿಜ್ಯ ಅಂಗ", "ಕವಿಗೋಷ್ಠಿ", "ಅಮೆರಿಕನ್ನಡಿಗರ ಗೋಷ್ಠಿ", "ಪುಸ್ತಕ ಬಿಡುಗಡೆ, ಪ್ರದರ್ಶನ" ಮುಂತಾದ ವಿಭಾಗಗಳನ್ನು ಮಾಡಿ ಎರಡು ದಿನಗಳ ಕಾರ್ಯಕ್ರಮಗಳು ನಡೆಯಲಿವೆ. ರಂಗಾಯಣದಿಂದ ಒಂದು ನಾಟಕ ಹಾಗೂ 'ರಾಷ್ಟ್ರ ದೇವೋ ಭವ' ಎಂಬ ನೃತ್ಯ ರೂಪಕಗಳು ಸ್ಥಳೀಯ ಕನ್ನಡಿಗರು ನಡೆಸಿಕೊಡುವ ಕಾರ್ಯಕ್ರಮಗಳಾಗಿರಲಿವೆ ಎನ್ನುತ್ತಾರೆ ಗುರು ಸಂಸ್ಥೆ ಹುಬ್ಬಳ್ಳಿಯ ಮುಖ್ಯಸ್ಥ ಯಶವಂತ ಸರದೇಶಪಾಂಡೆ.

ಜುಲೈ 9 ರಂದು ಅಮೆರಿಕನ್ನಡೋತ್ಸವ ಆರಂಭವಾಗುವುದಕ್ಕೆ ಮೊದಲು ಪುರಭವನದಿಂದ ರವೀಂದ್ರ ಕಲಾಕ್ಷೇತ್ರದ ತನಕ ಪುಟ್ಟ ಮೆರವಣಿಗೆ ನಡೆಯಲಿದೆ. ಅಮೆರಿಕನ್ನಡೋತ್ಸವದಲ್ಲಿ ಕಾರ್ಯಕ್ರಮ ನೀಡುವ ಎಲ್ಲರಿಗೂ ಕನ್ನಡ ಅಭಿವೃದ್ದಿ ಪ್ರಾಧಿಕಾರ ಪ್ರಮಾಣಪತ್ರ ನೀಡಲಿದೆ.

ಅಮೆರಿಕದ ನಾನಾ ಭಾಗಗಳಲ್ಲಿ ಇಂದು ಕನ್ನಡ ಕಲಿಕೆ ಸದ್ದಿಲ್ಲದೆ ನಡೆಯುತ್ತಿದೆ. 50ಕ್ಕೂ ಅಧಿಕ ಕನ್ನಡ ಕಲಿಸುವ ಶಾಲೆಗಳು ಅಲ್ಲಿದ್ದು, 150ಕ್ಕೂ ಹೆಚ್ಚು ಶಿಕ್ಷಕರಿದ್ದಾರೆ. 2 ಸಾವಿರಕ್ಕೂ ಅಧಿಕ ಮಂದಿ ಮಕ್ಕಳು ಕನ್ನಡ ಕಲಿಯುತ್ತಿದ್ದಾರೆ. ವಾರಕ್ಕೆ ಒಂದು ಗಂಟೆ ಯಾರದೋ ಮನೆ, ದೇವಸ್ಥಾನಗಳಲ್ಲಿ ಇಂತಹ ಕನ್ನಡ ಕಲಿಕಾ ತರಗತಿಗಳು ನಡೆಯುತ್ತಿವೆ.

ಕನ್ನಡದ ಸಾಂಸ್ಕೃತಿಕ ಬೇರು ಹೊರ ದೇಶಗಳಲ್ಲೂ ಚಾಚಿಕೊಂಡಿದೆ. ಅದನ್ನು ಬೆಳೆಸುವಲ್ಲಿ "ನಾವಿಕ"ದಂತಹ ಸಂಸ್ಥೆಗಳು ಪ್ರೋತ್ಸಾಹ ನೀಡುತ್ತಿವೆ. ತಾವು ಕಲಿತ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ತಾಯ್ನೆಲದಲ್ಲಿ ಪ್ರದರ್ಶಿಸುವುದು ಅನಿವಾಸಿ ಭಾರತೀಯರಿಗೆ ಒಂದು ಹೆಮ್ಮೆಯ ಸಂಗತಿ. "ನಾವಿಕ" ಇದಕ್ಕೊಂದು ಉತ್ತಮ ವೇದಿಕೆ ಒದಗಿಸಿಕೊಟ್ಟಿದೆ. ವಿಶ್ವದೆಲ್ಲೆಡೆ ಪಸರಿಸಿರುವ ಕನ್ನಡಿಗರ ನಡುವೆ ಸ್ನೇಹಸೇತುವಿನ ರೂಪದಲ್ಲಿ 'ಅಮೆರಿಕನ್ನಡೋತ್ಸವ' ನಡೆಯಲಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ವೆಬ್ದುನಿಯಾವನ್ನು ಓದಿ