ಗುಜರಾತ್ ದಂಗೆಗೆ ಮೋದಿ ಸರಕಾರ ಪರೋಕ್ಷ ಬೆಂಬಲ: ರಾಹುಲ್ ಗಾಂಧಿ

ಮಂಗಳವಾರ, 28 ಜನವರಿ 2014 (15:08 IST)
PTI
ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ನೇರವಾಗಿಯೇ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, 2002ರಲ್ಲಿ ನಡೆದ ಗುಜರಾತ್ ಗಲಭೆಯಲ್ಲಿ ಮೋದಿ ಸರ್ಕಾರ ಭಾಗಿಯಾಗಿದೆ ಎಂದು ಆರೋಪಿಸಿದ್ದಾರೆ.

ಮೊದಲ ಬಾರಿಗೆ ಆಂಗ್ಲ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ರಾಹುಲ್, 1984ರ ಸಿಖ್ ಗಲಭೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ. 2002ರ ಗಲಭೆಯಲ್ಲಿ ಗುಜರಾತ್ ಸರ್ಕಾರದ ಕೈವಾಡ ಇದ್ದು, 1984ರಲ್ಲಿ ದೆಹಲಿಯಲ್ಲಿ ನಡೆದ ಸಿಖ್‌ ನರಮೇಧ ಮತ್ತು ಗುಜರಾತ್ ಹತ್ಯಾ­ಕಾಂಡಕ್ಕೂ ಹೋಲಿಕೆ ಮಾಡುವುದು ಸರಿಯಲ್ಲ ಎಂದರು. ಅಲ್ಲದೆ 1984 ಗಲಭೆಯನ್ನು ನಿಯಂತ್ರಿಸಲು ಕಾಂಗ್ರೆಸ್ ಸರ್ಕಾರ ಯತ್ನಿಸಿತ್ತು ಎಂದು ಹೇಳಿದ್ದಾರೆ.

ಇದೇ ವೇಳೆ 1984ರ ಗಲಭೆಯಲ್ಲಿ ಕೆಲವು ಕಾಂಗ್ರೆಸ್ ನಾಯಕರು ಭಾಗಿಯಾಗಿರುವ ಸಾಧ್ಯತೆಗಳಿದ್ದು, ಆ ಕುರಿತು ಕಾನೂನು ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.

ಇನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಭರ್ಜರಿ ಜಯ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ರಾಹುಲ್, ಒಂದು ವೇಳೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದರೆ ಪಕ್ಷದ ಉಪಾಧ್ಯಕ್ಷನಾಗಿ ಸೋಲಿನ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ