2011; ಬೆಚ್ಚಿಬೀಳಿಸಿದ್ದ 'ಅನಂತ ಸಂಪತ್ತು'-ಶಬರಿಮಲೆ ದುರಂತ

ಶನಿವಾರ, 31 ಡಿಸೆಂಬರ್ 2011 (12:45 IST)
PTI
2011ರಲ್ಲಿ ದೊಡ್ಡ ಸುದ್ದಿ ಮಾಡಿದ್ದು ಅತ್ಯಂತ ಶ್ರೀಮಂತ ದೇವಸ್ಥಾನ ಎಂಬ ಹೆಸರು ಪಡೆದಿದ್ದ ತಿರುಪತಿಯ ತಿಮ್ಮಪ್ಪನನ್ನೂ ಹಿಂದಿಕ್ಕಿದ ಕೇರಳದ ತಿರುವನಂತಪುರದ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಆರು ಕೋಠಿಗಳಲ್ಲಿ ಲಭ್ಯವಾಗಿರುವ ಸಂಪತ್ತಿನ ಪ್ರಮಾಣವು ಸುಮಾರು 1 ಲಕ್ಷ ಕೋಟಿ ರೂಪಾಯಿಗಿಂತಲೂ ಅಧಿಕ ಮೌಲ್ಯದ ಸಂಪತ್ತು!

ದೇವಳದಲ್ಲಿರುವ ನಿಧಿಯ ಮೌಲ್ಯವು ಒಂದು ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಲಾಗುತ್ತಿದ್ದು, ಇದು ಕೇರಳದ ಸಾಲದ ಪ್ರಮಾಣವಾದ 70,969 ಕೋಟಿಗಿಂತಲೂ ಹೆಚ್ಚು. ಈಗಾಗಲೇ ಆರು ಕೊಠಡಿಗಳನ್ನು ತೆರೆಯಲಾಗಿದ್ದು, ಇನ್ನೂ ಒಂದು ಕೊಠಡಿಯನ್ನು ತೆರೆಯುವ ವಿವಾದ ಸುಪ್ರೀಂಕೋರ್ಟ್ ಕಟಕಟೆಯಲ್ಲಿದ್ದು ಅದರ ಅಂತಿಮ ತೀರ್ಪು ಹೊರಬೀಳಲು ಬಾಕಿ ಇದೆ.

ಅದರೊಳಗೆ ಪ್ರಾಚ್ಯ ವಸ್ತುಗಳ ವ್ಯಾಪ್ತಿಗೆ ಬರುವ ಅಮೂಲ್ಯ ಮುತ್ತು, ಆಭರಣ, ರತ್ನಗಳು ಇತ್ಯಾದಿ ದೊರಕಿರುವುದರಿಂದ, ಅವುಗಳ ನಿಖರವಾದ ಮೌಲ್ಯಗಳನ್ನು ಅಂದಾಜಿಸುವುದು ಕಷ್ಟ ಎಂದು ಇತಿಹಾಸ ತಜ್ಞ, ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಯ ಮಾಜಿ ಅಧ್ಯಕ್ಷ ಎಂ.ಜಿ.ಎಸ್.ನಾರಾಯಣನ್ ಅವರು ಹೇಳಿದ್ದರು. ಅಂದರೆ, ಒಟ್ಟು ಮೌಲ್ಯವು ಈಗ ಅಂದಾಜು ಹಾಕಿರುವ ಮೌಲ್ಯಕ್ಕಿಂತ ಎಷ್ಟೋ ಪಟ್ಟು ಹೆಚ್ಚೇ ಇರಬಹುದು.

PTI
ಇದುವರೆಗೆ ಸಿಕ್ಕಿದ ನಿಧಿಗಳಿಗೆ ಸಂಬಂಧಿ ಒಂದೇ ಕೊಠಡಿಯಲ್ಲಿ 1000 ಕಿಲೋ ಚಿನ್ನದ ನಾಣ್ಯಗಳು ದೊರೆತಿದ್ದು, ಇವು ಈಸ್ಟ್ ಇಂಡಿಯಾ ಕಂಪನಿ, ನೆಪೋಲಿಯನ್ ಕಾಲದ್ದಾಗಿದ್ದವು. ಬರ್ಮಾ ಮತ್ತು ಶ್ರೀಲಂಕಾದ ಒಂದು ಟನ್‌ನಷ್ಟು ಚಿನ್ನದ ತುಣುಕುಗಳು, ಚೀಲಗಟ್ಟಲೆ ವಜ್ರಗಳು, ಸರಪಳಿ ನೆಕ್ಲೇಸುಗಳು, ಚಿನ್ನದ ಹಗ್ಗ ಇತ್ಯಾದಿ ಅಪಾರ ಸಂಪತ್ತು ಪತ್ತೆಯಾಗಿತ್ತು. ಅಂತೆಯೇ ಮೂರುವರೆ ಅಡಿ ಎತ್ತರದ, ಮುತ್ತು ರತ್ನ, ಚಿನ್ನಗಳಿಂದ ಒಡಗೂಡಿದ ಮಹಾವಿಷ್ಣುವಿನ ವಿಗ್ರಹ, ದೇವರಿಗೆ ಹಾಕುವ 18 ಅಡಿ ಎತ್ತರದ, 35 ಕಿಲೋ ತೂಗುವ ಚಿನ್ನದ ಆಭರಣ, ತಲಾ ಒಂದೊಂದು ಕಿಲೋ ತೂಕದ ಚಿನ್ನದ ಮಾನವಾಕೃತಿಗಳು ಕೂಡ ಸಿಕ್ಕಿದ್ದವು. ಅಲ್ಲದೆ 1772ರ ಮುದ್ರೆಯುಳ್ಳ ನಾಣ್ಯಗಳೂ ಇದ್ದವು. ಅಂದು ಧರ್ಮ ರಾಜ ಎಂದೇ ಖ್ಯಾತಿವೆತ್ತಿದ್ದ, ತಿರುವಾಂಕೂರಿನ ಮಹಾರಾಜ ಕಾರ್ತಿಕ ತಿರುನಾಳ್ ರಾಮ ವರ್ಮನ ಕಾಲದ ನಾಣ್ಯಗಳಾಗಿತ್ತವು. ಇಲ್ಲಿ ದೊರೆತ ಸಂಪತ್ತು, ಇತಿಹಾಸದ ಮೇಲೂ ಬೆಳಕು ಚೆಲ್ಲುತ್ತದೆ.

ತಿರುವಾಂಕೂರು ಎಂಬುದು ಬಂದರು ನಗರಿಯಾಗಿ ಅಂದಿನ ಕಾಲದಲ್ಲಿ ವ್ಯಾಪಾರ ವಹಿವಾಟಿಗೆ ಪ್ರಸಿದ್ಧವಾಗಿತ್ತು. ಸಮುದ್ರ ಮಾರ್ಗದ ವ್ಯಾಪಾರದ ಮೂಲಕವೇ ಇಲ್ಲಿ ವಿದೇಶೀ ನಾಣ್ಯಗಳೆಲ್ಲ ಪತ್ತೆಯಾಗಿವೆ ಎಂದು ಭಾವಿಸಲಾಗಿದೆ.

ನಿಧಿಯನ್ನು ನೋಡಲು ಯಾರಿಗೂ ಪ್ರವೇಶವಿರಲಿಲ್ಲ. ಮಾಧ್ಯಮಗಳಿಗೂ ನಿರ್ಬಂಧಗಳಿವೆ. ಎ ಬಿ ಸಿ ಡಿ ಇ ಎಫ್‌ಗಳೆಂಬ ಆರು ಕೊಠಡಿಗಳಲ್ಲಿ ಈ ಅಪಾರ ಸಂಪತ್ತು ಕಂಡು ಬಂದಿವೆ. ಎಲ್ಲ ದ್ವಾರಗಳನ್ನು ಮುಚ್ಚಲಾಗಿದ್ದು, ಎರಡು ಸಶಸ್ತ್ರ ಪಡೆಗಳ ಭದ್ರತೆ ಏರ್ಪಡಿಸಲಾಗಿದೆ. ಮೂರು ಹಂತದ ಭದ್ರತಾ ಕ್ರಮಗಳನ್ನು ರೂಪಿಸಲಾಗಿದ್ದು, ದೇವಸ್ಥಾನದ ಒಳಗೆ ಹೋಗುವವರನ್ನು ತೀವ್ರ ತಪಾಸಣೆಗೆ ಗುರಿಪಡಿಸಲಾಗುತ್ತಿದೆ.

PTI
ಆಘಾತ ತಂದೊಡ್ಡಿದ್ದ ಶಬರಿಮಲೆ ದುರಂತ

ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರಳಿದ್ದ ಭಕ್ತಸ್ತೋಮ ಮಕರಜ್ಯೋತಿ ನೋಡಿ ವಾಪಸಾಗುತ್ತಿದ್ದ ವೇಳೆ ಸಂಭವಿಸಿದ್ದ ಕಾಲ್ತುಳಿತದಲ್ಲಿ ಕರ್ನಾಟಕದ 33 ಮಂದಿ ಸೇರಿದಂತೆ ಒಟ್ಟು 102 ಮಂದಿ ಸಾವನ್ನಪ್ಪಿರುವ ಘಟನೆ 2011ರಲ್ಲಿ ಆಘಾತ ತಂದೊಡ್ಡಿದ್ದ ಸುದ್ದಿ.

ಶಬರಿಮಲೆಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಬಳ್ಳಾರಿ, ಬೆಂಗಳೂರು, ಅರಸೀಕೆರೆ, ಎಚ್.ಡಿ.ಕೋಟೆ, ಪಿರಿಯಾಪಟ್ಟಣ ಸೇರಿದಂತೆ ರಾಜ್ಯದ 33 ಮಂದಿ ಭಕ್ತರು ಸಾವನ್ನಪ್ಪಿದ್ದರು.

ಘಟನೆಯಲ್ಲಿ ಕರ್ನಾಟಕದ 33, ತಮಿಳುನಾಡಿನ 31, ಆಂಧ್ರಪ್ರದೇಶದ 20, ಕೇರಳದ ಐವರು, ಪುದುಚೇರಿಯ ಇಬ್ಬರು ಸೇರಿದಂತೆ 102 ಮಂದಿ ಸಾವನ್ನಪ್ಪಿದ್ದರು.

ಶಬರಿಮಲೆಯ ಅತಿದೊಡ್ಡ ದುರಂತ...

ಮೂಲಗಳ ಪ್ರಕಾರ ಶಬರಿಮಲೆಯಲ್ಲಿ ನಡೆದ ಅತಿದೊಡ್ಡ ದುರಂತವಿದು. ಈ ಹಿಂದೆ ಇಷ್ಟೊಂದು ಪ್ರಮಾಣದಲ್ಲಿ ಭಕ್ತರು ಬಲಿಯಾದ ಉದಾಹರಣೆಗಳು ನಡೆದಿಲ್ಲ.1952ರಲ್ಲಿ ಪಟಾಕಿ ದಾಸ್ತಾನು ಮಳಿಗೆಯೊಂದು ಸ್ಫೋಟಿಸಿದ್ದರಿಂದ 65 ಮಂದಿ ಭಕ್ತರು, 1999ರಲ್ಲಿ ಪಂಪಾ ಸಮೀಪ ಕಾಲ್ತುಳಿತಕ್ಕೆ 53 ಮಂದಿ ಭಕ್ತರು ಬಲಿಯಾದುದು ಶಬರಿಮಲೆಯ ಇತ್ತೀಚಿನ ದುರ್ಘಟನೆಗಳು.

PTI
ಬೆಲೆ ಏರಿಕೆ ಸಿಟ್ಟು: ಸಚಿವ ಶರದ್ ಪವಾರ್‌ಗೆ ಕಪಾಳಮೋಕ್ಷ

ಮಾಜಿ ಟೆಲಿಕಾಂ ಸಚಿವ ಸುಖ್‌ರಾಮ್‌ ಮೇಲೆ ಹಲ್ಲೆ ನಡೆಸಿದ್ದ ವ್ಯಕ್ತಿಯೇ ಸಂಸತ್ ಭವನದ ಎನ್‌ಡಿಎಂಸಿ ಸೆಂಟರ್‌ ಬಳಿ ಕೇಂದ್ರ ಕೃಷಿ ಖಾತೆ ಸಚಿವ ಶರದ್ ಪವಾರ್‌ಗೆ ಕಪಾಳಮೋಕ್ಷ ಮಾಡಿರುವ ಘಟನೆ 2011ರಲ್ಲಿ ಮಹತ್ವ ಪಡೆದಿದೆ.

ಹರ್ವಿಂದರ್ ಸಿಂಗ್ ಎನ್ನುವ ಸಿಖ್ ಸಮುದಾಯದ ಯುವಕ ಪವಾರ್‌ಗೆ ಕಪಾಳ ಮೋಕ್ಷ ಮಾಡಿದ್ದ. ಭದ್ರತಾ ಪಡೆಗಳು ತಡೆಯಲು ಯತ್ನಿಸಿದಾಗ ಚೂರಿಯನ್ನು ಕೂಡಾ ತೋರಿಸಿದ್ದ, ಕೂಡಲೇ ಪೊಲೀಸರು ಆತನನ್ನು ಥಳಿಸಿ ಬಂಧಿಸಿದ್ದರು.

ರೋಹಿಣಿ ನಗರದ ನಿವಾಸಿಯಾದ ಹರ್ವಿಂದರ್ ಸಿಂಗ್ ಟ್ರಾನ್ಸ್‌ಪೋರ್ಟ್ ವಹಿವಾಟು ನಡೆಸುತ್ತಿದ್ದು, ಅಗತ್ಯ ವಸ್ತುಗಳ ದರ ಏರಿಕೆಯಿಂದ ಬೇಸತ್ತು ಹಲ್ಲೆ ಮಾಡಿದ್ದ.

ವೆಬ್ದುನಿಯಾವನ್ನು ಓದಿ