2011ರ ಕ್ರೀಡೆ; ಭಾರತದ ಪ್ರತಿಷ್ಠೆ ಎತ್ತಿಹಿಡಿದ ಫಾರ್ಮುಲಾ ಒನ್

- ನಾಗರಾಜ್ ಬೇಳ

WD


'2011' ಭಾರತೀಯ ಕ್ರೀಡೆಯ ಪಾಲಿಗೆ ಹಲವು ಏಳುಬೀಳುಗಳ ಸನ್ನಿವೇಶಗಳನ್ನು ಸೃಷ್ಟಿಸಿದ ವರ್ಷವಾಗಿತ್ತು. ಕ್ರಿಕೆಟ್‌ನಲ್ಲಿ ವಿಶ್ವಕಪ್ ಗೆಲುವು ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದರೆ ಅತ್ತ ಗ್ರ್ಯಾಂಡ್‌ ಪ್ರಿಕ್ಸ್ ಫಾರ್ಮುಲಾ ಒನ್ ರೇಸ್‌ನ ಯಶಸ್ವಿ ಆಯೋಜನೆಯು ದೇಶದ ಪ್ರತಿಷ್ಠೆ ವೃದ್ಧಿಗೆ ಕಾರಣವಾಗಿತ್ತು.

ಮತ್ತೊಂದೆಡೆ ಏಷ್ಯಾ ಹಾಗೂ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಕರ್ನಾಟಕದ ಅಶ್ವಿನಿ ಅಕ್ಕುಂಜಿ ಸೇರಿದಂತೆ ಆರು ಮಂದಿ ಅಥ್ಲೀಟುಗಳು ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿರುವುದು ಕ್ರೀಡಾಕ್ಷೇತ್ರಕ್ಕೊಂದು ಕಪ್ಪು ಚುಕ್ಕೆಯಾಗಿದೆ. ಆದರೆ ಸ್ಕ್ವಾಷ್, ಟೆನಿಸ್, ಬ್ಯಾಡ್ಮಿಂಟನ್, ಆರ್ಚರಿ ಹಾಗೂ ಬಾಕ್ಸಿಂಗ್ ರಂಗಗಳಲ್ಲಿ ಹೊಸ ಕ್ರೀಡಾಳುಗಳ ಉದ್ಬವವು ಭವಿಷ್ಯದಲ್ಲಿ ದೇಶದ ಆಶಾಕಿರಣವಾಗಿ ಪರಿಣಮಿಸಿದ್ದಾರೆ.

'ಗ್ರೇಟರ್ ನೋಯ್ಡಾದಲ್ಲಿ ಎಫ್-1 ಸಕ್ಸಸ್ ಸ್ಟೋರಿ'
ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ಬುದ್ಧ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ಕಣ್ಮನ ಸೆಳೆದ ಫಾರ್ಮುಲಾ ಒನ್ ರೇಸಿಂಗ್ ಯಶಸ್ವಿ ಆಯೋಜನೆ ಕ್ರೀಡಾ ಇತಿಹಾಸದಲ್ಲಿ ದೇಶದ ನೂತನ ಅಧ್ಯಾಯಕ್ಕೆ ನಾಂದಿಯಾಗಿತ್ತು. ಇದೇ ಮೊದಲ ಬಾರಿಗೆ ಎಫ್‌-1 ರೇಸ್‌ಗೆ ಭಾರತ ಆತಿಥ್ಯ ವಹಿಸಿತ್ತು. ಆ ಮೂಲಕ ಅತ್ಯಂತ ದುಬಾರಿ ಕೂಟಗಳಿಗೆ ಆತಿಥ್ಯ ವಹಿಸಿದ್ದ ಕೆಲವೇ ಕೆಲವು ರಾಷ್ಟ್ರಗಳ ಪಟ್ಟಿಗೆ ಸೇರಿಕೊಂಡಿತ್ತು.

ಮದ್ಯದೊರೆ ಉದ್ಯಮಿ ವಿಜಯ್ ಮಲ್ಯ ಮಾಲಿಕತ್ವದ ಫೋರ್ಸ್ ಇಂಡಿಯಾ ಹಾಗೂ ಭಾರತೀಯ ಚಾಲಕ ನರೇನ್ಕಾರ್ತಿಕೇಯನ್ ಕೂಟದಲ್ಲಿ ಭಾಗವಹಿಸಿರುವುದು ಮತ್ತೊಂದು ಆಕರ್ಷಣೆಯಾಗಿತ್ತು. ಫಾರ್ಮುಲಾ ಒನ್ ರೇಸ್‌ಗೆ ಕ್ರಿಕೆಟ್‌ನ ಆರಾಧ್ಯ ದೈವ ಸಚಿನ್ ತೆಂಡೂಲ್ಕರ್ 'ಚಕಾರ್ಡ್ ಫ್ಲ್ಯಾಗ್' ತೋರಿಸುವ ಮೂಲಕ ಚಾಲನೆ ನೀಡಿದ್ದರು. ಈ ಅಪೂರ್ವ ಕ್ಷಣವನ್ನು ವೀಕ್ಷಿಸಲು ಕ್ರಿಕಿಟಿಗರ ಸಹಿತ ಬಾಲಿವುಡ್ ತಾರೆಗಳ ದಂಡೇ ಆಗಮಿಸಿತ್ತು. ಇದೇ ಸಂದರ್ಭದಲ್ಲಿ ಎಫ್-1 ದಂತಕಥೆ ಮೈಕಲ್ ಶೂಮಕರ್ ಅವರನ್ನು ಕ್ರಿಕೆಟ್ ದೇವರು ಭೇಟಿಯಾದರು.

ಇದರಂತೆ ದೇಶದಲ್ಲಿ ಸಾಗಿದ ಚೊಚ್ಚಲ ಫಾರ್ಮುಲಾ ಒನ್ ರೇಸ್‌ ಗ್ರ್ಯಾನ್ ಪ್ರೀಯಲ್ಲಿ ರೆಡ್ ಬುಲ್ ತಂಡದ ಸೆಬಾಸ್ಟಿಯನ್ ವೆಟ್ಟೆಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಜೆನ್ಸನ್ ಬಟನ್ ಎರಡನೇ ಹಾಗೂ ಫೆರ್ನಾಂಡೊ ಅಲೋನ್ಸೋ ಅವರು ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟರು. ಅದೇ ರೀತಿ ಭಾರತದ (ತಮಿಳುನಾಡು ಮೂಲದ) ಕಾರ್ತಿಕೇಯನ್ ಅವರು 17ನೇ ಸ್ಥಾನ ಪಡೆದರು.

WD


ಡೋಪಿಂಗ್; ಚಿನ್ನದ ಹುಡುಗಿ ಅಶ್ವಿನಿಗೆ ನಿಷೇಧ...
ಒಲಿಂಪಿಕ್‌ನಲ್ಲಿ ಪದಕ ನಿರೀಕ್ಷೆಯಾಗಿದ್ದ ಚಿನ್ನದ ಹುಡುಗಿ ಕರ್ನಾಟಕದ ಹೆಮ್ಮೆಯ ಅಶ್ವಿನಿ ಅಕ್ಕುಂಜಿ ಸಹಿತ ಆರು ಮಂದಿ ಅಥ್ಲೀಟುಗಳು ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದಿರುವುದು ದೇಶದ ಒಲಿಂಪಿಕ್ ನಿರೀಕ್ಷೆಗೆ ಬಹುದೊಡ್ಡ ಹೊಡೆತ ನೀಡಿತ್ತು.

ಪ್ರಕರಣದ ವಿಚಾರಣೆ ನಡೆಸಿದ್ದ ರಾಷ್ಟ್ರೀಯ ಉದ್ದೀಪನಾ ತಡೆ ಘಟಕದ (ನಾಡಾ) ಶಿಸ್ತು ಸಮಿತಿಯು ಅಶ್ವಿನಿ ಸೇರಿದಂತೆ ಆರು ಮಂದಿ ಅಥ್ಲೀಟುಗಳಿಗೆ ಒಂದು ವರ್ಷದ ನಿಷೇಧ ಹೇರಿತ್ತು. ಇದರೊಂದಿಗೆ ಒಲಿಂಪಿಕ್ ಕನಸು ಬಹುತೇಕ ಭಗ್ನಗೊಂಡಂತಾಗಿದೆ.

ಅಶ್ವಿನಿ ಜೊತೆಗೆ ಮನದೀಪ್ ಕೌರ್, ಸಿನಿ ಜೋಸ್, ಮೇರಿ ಟಿಯಾನಾ ಥಾಮಸ್, ಪ್ರಿಯಾಂಕಾ ಪನ್ವರ್ ಮತ್ತು ಜ್ವಾನಾ ಮುರ್ಮು ಕಳೆದ ಜೂನ್‌ನಲ್ಲಿ ನಡೆದ ಉದ್ದೀಪನ ಪರೀಕ್ಷೆಯಲ್ಲಿ ನಿಷೇಧಿತ ಸ್ಟಿರಾಯ್ಡ್ ಸೇವಿಸಿರುವುದು ಪತ್ತೆಯಾಗಿತ್ತು. ಆನಂತರ ಜೂನ್ 4ರಂದು ಅಥ್ಲೀಟ್‌ಗಳನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿತ್ತು

2010ರ ದೆಹಲಿ ಕಾಮನ್‌ವೆಲ್ತ್ ಗೇಮ್ಸ್‌ ಹಾಗೂ ಏಷ್ಯಾ ಗೇಮ್ಸ್ 400 ಮೀಟರ್ ಹರ್ಡಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದ ಅಶ್ವಿನಿ ಈ ಎರಡೂ ಟೂರ್ನಿಗಳಲ್ಲಿ 4x400 ಮೀಟರ್ ರಿಲೇನಲ್ಲೂ ಸ್ವರ್ಣದ ಪದಕ ಗೆದ್ದ ಸಾಧನೆ ಮಾಡಿದ್ದರು. ಇದೀಗ ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಶಿಕ್ಷೆಗೆ ಗುರಿಯಾಗಿರುವ ಅಶ್ವಿನಿಗೆ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ.

ಮುಂದಿನ ಜುಲೈ 3ಕ್ಕೆ ಶಿಕ್ಷೆಯ ಅವಧಿ ಪೂರ್ಣಗೊಳ್ಳಲಿದೆ. ಇದರಿಂದಾಗಿ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಕನಸು ಬಹುತೇಕ ಅಂತ್ಯವಾಗಿದೆ. ಯಾಕೆಂದರೆ ಕೊನೆಯ ಒಲಿಂಪಿಕ್ ಅರ್ಹತಾ ಕೂಟ ಜೂನ್ 29 ಹಾಗೂ 30ರಂದು ಸಾಗಲಿದೆ. ಇದಲ್ಲದೆ ನಿಷೇಧ ಮುಗಿದ ಬಳಿಕ ಕ್ರೀಡಾಳುಗಳು ಮತ್ತೆ ಉದ್ದೀಪನಾ ಪರೀಕ್ಷೆಗೆ ಒಳಗಾಗಬೇಕಾಗಿದೆ.

PTI


ಡೋವ್ ವಿವಾದ; ಲಂಡನ್ ಒಲಿಂಪಿಕ್ಸ್‌ ಬಹಿಷ್ಕಾರ?
ಲಂಡನ್ ಒಲಿಂಪಿಕ್ಸ್‌ಗೆ ಡೋವ್ ಕಂಪೆನಿಗೆ ಪ್ರಾಯೋಜಕತ್ವ ನೀಡಬಾರದು ಎಂದು ಎದ್ದಿರುವ ವಿವಾದ ಪ್ರತಿಷ್ಠಿತ ಕೂಟ ಸಮೀಪಿಸುರುವಂತೆಯೇ ದೇಶಾದ್ಯಂತ ಮತ್ತಷ್ಟು ತೀವ್ರತೆಯನ್ನು ಪಡೆಯುತ್ತಿದೆ. ಭೋಪಾಲ್ ಅನಿಲ ದುರಂತಕ್ಕೆ ಕಾರಣವಾಗಿರುವ 'ಯೂನಿಯನ್ ಕಾರ್ಬೈಡ್' ಅನ್ನು ಡೋವ್ ಕಂಪೆನಿ ಖರೀದಿಸಿತ್ತು.

ಆದ್ದರಿಂದ ಪ್ರಾಯೋಜಕತ್ವಕ್ಕೆ ಅವಕಾಶ ನೀಡಬಾರದು ಎಂದು ದುರಂತದ ಸಂತ್ರಸ್ತರು ಹಾಗೂ ದೇಶದ ಪ್ರಮುಖ ಅಥ್ಲೀಟ್‌ಗಳು ಒತ್ತಾಯ ಮಾಡಿದ್ದರು. ಇದರಂತೆ ಮಣಿದಿದ್ದ ಡೋವ್ ಕೆಮಿಕಲ್ ಸಂಸ್ಥೆ ಒಲಿಂಪಿಕ್ ಕೂಟದಿಂದ ತಮ್ಮ ಲಾಂಛನವನ್ನು ಹಿಂಪಡೆಯಲು ನಿರ್ಧರಿಸಿತ್ತು.

ರಾಷ್ಟ್ರೀಯ ಕ್ರೀಡಾ ಮಸೂದೆ ಗದ್ದಲ...
ದೇಶದ ಕ್ರೀಡೆಯ ಅಭಿವೃದ್ಧಿಗೆ ರಾಷ್ಟ್ರೀಯ ಕ್ರೀಡಾ ಮಸೂದೆಗಾಗಿ ಕ್ರೀಡಾ ಸಚಿವ ಅಜಯ್ ಮಾಕೆನ್ ಸಂಸತ್ತಿನಲ್ಲಿ ಮಂಡಿಸಿದ್ದರು. ಆದರೆ ಮಸೂದೆಯಲ್ಲಿ ಕೆಲ ಲೋಪದೋಷಗಳಿವೆ ಎಂದು ಕಳವಳ ವ್ಯಕ್ತಪಡಿಸಿದ ಹಲವಾರು ಸಚಿವರು ರಾಷ್ಟ್ರೀಯ ಕ್ರೀಡಾ ಮಸೂದೆಯನ್ನು ತಿರಸ್ಕರಿಸಿದ್ದರು.

ಮತ್ತೊಂದೆಡೆ ಭಾರತೀಯ ಕ್ರೀಡಾ ಪ್ರಾಧಿಕಾರದೊಂದಿಗೆ ಗುರುತಿಸಿಕೊಳ್ಳಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರಾಕರಿಸಿದ್ದರಿಂದ ಇತ್ತ ವಿಭಾಗಗಳ ವಾಗ್ವಾದಕ್ಕೆ ಕಾರಣವಾಗಿತ್ತು. ಕ್ರೀಡಾ ಮಸೂದೆಯನ್ನು ಜಾರಿಗೆ ತರುವುದರಿಂದ ಆಡಳಿತದಲ್ಲಿ ಪಾರದರ್ಶಕತೆ ತರಲು ಸಾಧ್ಯವಾಗುತ್ತದೆ ಎಂದು ಕ್ರೀಡಾ ಸಚಿವರು ವಾದಿಸಿದ್ದರು.

PTI


ವಿದಾಯ ಹಾಡಿದ ಬೈಚುಂಗ್ ಭುಟಿಯಾ...
ದೇಶದ ಯುವ ಫುಟ್ಬಾಲ್ ಆಟಗಾರರಿಗೆ ಮಾದರಿಯಾಗಿದ್ದ ಬೈಚುಂಗ್ ಭುಟಿಯಾ ತಮ್ಮ ಅಂತರಾಷ್ಟ್ರೀಯ ಕೆರಿಯರ್‌ಗೆ ಇದೇ ವರ್ಷ ನಿವೃತ್ತಿ ಘೋಷಿಸಿದ್ದರು. ನಿರಂತರವಾಗಿ ಕಾಡಿದ ಗಾಯದ ಸಮಸ್ಯೆಯೇ ಭುಟಿಯಾ ತಮ್ಮ 16 ವರ್ಷಗಳ ಕೆರಿಯರ್‌ಗೆ ನಿವೃತ್ತಿ ಘೋಷಿಸಲು ಕಾರಣ ಎನ್ನಲಾಗಿದೆ. 'ಸಿಕ್ಕಿಂ ಸ್ನೈಪರ್' ಎಂದೇ ಖ್ಯಾತಿ ಪಡೆದಿದ್ದ ಭುಟಿಯಾ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಛಾಪು ಮೂಡಿಸಲು ಪ್ರಮುಖ ಕಾರಣರಾಗಿದ್ದರು.

ಕೋಲ್ಕತ್ತಾದಲ್ಲಿ ಮೆಸ್ಸಿ ಮೆನಿಯಾ...
ದೇಶದ ಫುಟ್ಬಾಲ್ ಪ್ರಿಯರ ಪಾಲಿಗೆ ಇಂದೊಂದು ಮರೆಯಲಾಗದ ಕ್ಷಣ. ವಿಶ್ವ ಫುಟ್ಬಾಲ್ ದಿಗ್ಗಜ ಹಾಗೂ ಅರ್ಜೆಂಟೀನಾ ನಾಯಕರಾಗಿರುವ ಲಯನೆಲ್ ಮೆಸ್ಸಿ ದೇಶದ ಕಾಲ್ಚೆಂಡಿನ ನಗರ ಕೋಲ್ಕತಾಕ್ಕೆ ಭೇಟಿ ನೀಡಿದ್ದರಲ್ಲದೇ ಪ್ರದರ್ಶನ ಪಂದ್ಯದಲ್ಲಿ ಭಾಗವಹಿಸುವ ಮೂಲಕ ತಮ್ಮ ಜಾದೂ ಪ್ರದರ್ಶಿಸಿದ್ದರು. ಸೆಪ್ಟೆಂಬರ್ 1ರಂದು ಸಾಗಿದ ಈ ಪಂದ್ಯವನ್ನು ನೋಡಲು ಇಡೀ ಕೊಲ್ಕತಾ ಮೈದಾನ ಕಿಕ್ಕಿರಿದು ತುಂಬಿದ್ದವು.

ಮತ್ತೊಂದೆಡೆ ಎಎಫ್‌ಸಿ ಎಷ್ಯಾ ಕಪ್‌ನಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲಲಾಗದೇ ಟೂರ್ನಿಯಿಂದ ಹೊರನಡೆದಿದ್ದ ಭಾರತೀಯ ಪುಟ್ಬಾಲ್ ತಂಡವು ಆನಂತರ ಸಾಗಿದ 'ಸ್ಯಾಫ್ ಕಪ್' ಫುಟ್ಬಾಲ್ ಚಾಂಪಿಯನ್‌ಶಿಪನ್ನು ಎತ್ತಿಹಿಡಿಯುವ ಮೂಲಕ ಸಮಾಧಾನಕರ ಅಂತ್ಯ ಹಾಡಿತ್ತು. ಅಮೋಘ ಆಟದ ಪ್ರದರ್ಶನ ನೀಡಿದ್ದ ಭಾರತೀಯ ತಂಡವು ಫೈನಲ್‌ನಲ್ಲಿ ಅಫಘಾನಿಸ್ತಾನವನ್ನು 4-0 ಅಂತರದಿಂದ ಬಗ್ಗುಬಡಿದಿತ್ತು.

PR


ಯುವ ಸೆನ್ಸೆಷನಲ್ ದೀಪಿಕಾ ಪಲ್ಲೀಕಲ್...
ಭಾರತೀಯ ಸ್ಕ್ವಾಷ್ ರಂಗದಲ್ಲಿ ಯುವ ಸೆನ್ಸೆಷನಲ್ ಎನಿಸಿಕೊಂಡಿರುವ ದೀಪಿಕಾ ಪಲ್ಲೀಕಲ್ ಪ್ರಸಕ್ತ ಸಾಲಿನಲ್ಲಿ ಮೂರು ವಿಸ್ಬಾ ಟ್ರೋಫಿಯನ್ನು ಬಗಲಿಗೇರಿಸಿಕೊಂಡಿದ್ದರು. ತಮ್ಮ ಮೈಮಾಟದಿಂದ ಪಡ್ಡೆ ಹುಡುಗರ ಪಾಲಿಗೆ ಹಾಟ್ ಹಾಟ್ ಎನಿಸಿಕೊಂಡಿರುವ ದೇಶದ ನಂ. 1 ಸ್ಕ್ವಾಷ್ ಪಟು ಚೆನ್ನೈ ಮೂಲದ 20ರ ಹರೆಯದ ದೀಪಿಕಾ ಅಂಗಣದಲ್ಲೂ ಅದ್ಭುತ ನಿರ್ವಹಣೆ ಮುಂದುವರಿಸಿದ್ದಾರೆ.

ಕಬಡ್ಡಿ ವಿಶ್ವಕಪ್‌: ಭಾರತಕ್ಕೆ ಪ್ರಶಸ್ತಿಯ ಗರಿ...
ಪಂಜಾಬ್‌ನ ಲೂಧಿಯಾನಾದಲ್ಲಿ ನಡೆದ ಕಬಡ್ಡಿ ವಿಶ್ವಕಪ್‌ 2011 ಟೂರ್ನಮೆಂಟ್‌ನಲ್ಲಿ ಭಾರತದ ಮಹಿಳೆಯರ ಹಾಗೂ ಪುರುಷರ ತಂಡವು ವಿಶ್ವ ಚಾಂಪಿಯನ್‌ ಆಗಿ ಹೊರ ಹೊಮ್ಮಿದೆ. ಪುರುಷರ ವಿಭಾಗದ ಫೈನಲ್‌ ಪಂದ್ಯದಲ್ಲಿ ಕೆನಡಾ ತಂಡವನ್ನು 59-25 ಅಂತರದಿಂದ ಮಣಿಸಿದ ಭಾರತ ಸತತ ನಾಲ್ಕನೇ ಬಾರಿ ಚಾಂಪಿಯನ್‌‌ಶಿಪ್‌ ಬಗಲಿಗೇರಿಸಿತ್ತು. ಮತ್ತೊಂದೆಡೆ ಇದೇ ಮೊದಲ ಬಾರಿಗೆ ನಡೆದ ಮಹಿಳೆಯರ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಭಾರತೀಯ ಕುವರಿಗಳು ಬ್ರಿಟನ್‌ ತಂಡವನ್ನು 44-17 ಅಂಕಗಳಿಂದ ಮಣಿಸಿತ್ತು.

ವಿಶ್ವ ಚಾಂಪಿಯನ್‌ಶಿಪ್ ಉಳಿಸಿಕೊಂಡ ರಂಜನ್ ಸೋಧಿ...
ಇನ್ನು ಶೂಟಿಂಗ್ ವಿಭಾಗದತ್ತ ಗಮನ ಹಾಯಿಸುವುದಾದರೆ ರಂಜನ್ ಸೋಧಿ ತಮ್ಮ ವಿಶ್ವ ಪ್ರಶಸ್ತಿಯನ್ನು ಉಳಿಸಿಕೊಂಡಿರುವುದು ಪ್ರಸಕ್ತ ಸಾಲಿನ ರೋಚಕ ಕ್ಷಣಗಳಲ್ಲಿ ಒಂದಾಗಿದೆ. ಚೀನಾದ ಬಿನ್‌ಯೂನ್ ಹು ಅವರನ್ನು ಟ್ರೈ ಬ್ರೇಕರ್‌ನಲ್ಲಿ ಮಣಿಸಿದ್ದ ಸೋಧಿ ಸತತ ಎರಡನೇ ಬಾರಿಗೆ ವಿಶ್ವ ಚಾಂಪಿಯನ್‌ಶಿಪ್ ಗೆದ್ದ ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದರು.

ದೀಪಿಕಾ; ಭಾರತದ ಒಲಿಂಪಿಕ್ ನಿರೀಕ್ಷೆ...
ಆರ್ಚರಿ ವಿಭಾಗದಲ್ಲಿ ಭಾರತದ ಒಲಿಂಪಿಕ್ ನಿರೀಕ್ಷೆಯಾಗಿರುವ ಬಿಲ್ಲುಗಾರ್ತಿ ದೀಪಿಕಾ ಪ್ರಸಕ್ತ ಸಾಲಿನಲ್ಲಿ ಸ್ಥಿರ ಪ್ರದರ್ಶನ ಮಟ್ಟ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇಟೆಲಿಯಲ್ಲಿ ಸಾಗಿದ ವಿಶ್ವ ಚಾಂಪಿಯನ್‌ಶಿಪ್‌ನ ಆರ್ಚರಿ ರಿಕರ್ವ್ ತಂಡ ವಿಭಾಗದಲ್ಲಿ ದೀಪಿಕಾ ಕುಮಾರಿ, ಚೆಕ್ರೊವೊಲು ಸುರ್ರೆ ಮತ್ತು ಲೈಶ್ರಾಮ್ ಬೊಂಬಯಲಾ ದೇವಿ ರನ್ನರ್-ಅಪ್ ಪ್ರಶಸ್ತಿ ಗೆಲ್ಲುವ ಮೂಲಕ ಹೊಸ ನಿರೀಕ್ಷೆ ಹುಟ್ಟಿಸಿದ್ದಾರೆ.

ಅಷ್ಟೇ ಅಲ್ಲದೆ ಜೂನಿಯರ್ ಮಹಿಳೆಯರ ವೈಯಕ್ತಿಕ ರಿಕರ್ವ್‌ನಲ್ಲೂ ಸತತ ಎರಡನೇ ಬಾರಿಗೆ ವಿಶ್ವ ಚಾಂಪಿಯನ್‌ಶಿಪ್ ಗೆದ್ದ ಹೆಗ್ಗಳಿಕೆಗೂ ದೀಪಿಕಾ ಪಾತ್ರರಾಗಿದ್ದರು. ಪ್ರಸಕ್ತ ವರ್ಷದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಡಜನ್ ಪದಕ ಗೆದ್ದಿರುವ ದೀಪಿಕಾ (2 ಚಿನ್ನ, 6 ಬೆಳ್ಳಿ ಮತ್ತು 4 ಬೆಳ್ಳಿ) ದೇಶದ ಪದಕ ನಿರೀಕ್ಷೆಯಾಗಿದ್ದಾರೆ.

ಶಿವ ಕೇಶವನ್ ಸಾಧನೆ...
ಬಹುತೇಕ ಭಾರತೀಯರು ಈ ಹೆಸರನ್ನು ಕೇಳಿರುವ ಸಾಧ್ಯತೆ ಅತಿ ವಿರಳ. ಆದರೆ ಇಂಟರ್‌ನ್ಯಾಷನಲ್ ವಿಂಟರ್ ಸ್ಫೋರ್ಟ್ಸ್‌ ಸ್ಲೆಜ್ ವಿಭಾಗದಲ್ಲಿ 30ರ ಹರೆಯದ ಶಿವ ಕೇಶವನ್ ದೇಶಕ್ಕೆ ಚಿನ್ನ ದೊರಕಿಸಿಕೊಟ್ಟಿದ್ದರು. ಜಪಾನ್‌ನಲ್ಲಿ ಸಾಗಿದ ಏಷ್ಯಾ ಕಪ್ ಜಾರುಬಂಡಿ ವಿಭಾಗದಲ್ಲಿ ಕೇಶವನ್ ಗಂಟೆಗೆ 134.3 ವೇಗದಲ್ಲಿ ಸಂಚರಿಸುವ ಮೂಲಕ ಸಾಧನೆ ಮೆರೆದಿದ್ದರು.

ಆಶಾಕಿರಣವಾದ ಬಾಕ್ಸಿಂಗ್‌...
ಅಜರ್‌ಬೈಜಾನ್‌ನಲ್ಲಿ ಸಾಗಿದ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ನ 69 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿರುವ ಭಾರತದ ವಿಕಾಸ್ ಕೃಷ್ಣನ್ ಭಾರತದ ಹೊಸ ಆಶಾಕಿರಣವಾಗಿ ಹೊರಬಂದಿದ್ದಾರೆ. ಆ ಮೂಲಕ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಭಾರತದ ಎರಡನೇ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಈ ಹರಿಯಾಣ ಬಾಕ್ಸರ್ ಪಾತ್ರರಾಗಿದ್ದಾರೆ. ಈ ಹಿಂದೆ 2009ರಲ್ಲಿ ವಿಜೆಂದರ್ ಸಿಂಗ್ ಕಂಚಿನ ಪದಕ ಗೆದ್ದುಕೊಂಡಿದ್ದರು. ಹಾಗೆಯೇ ವಲ್ಡ್ ಸಿರೀಸ್ ಆಫ್ ಬಾಕ್ಸಿಂಗ್ ಚಾಂಪಿಯನ್‌ನಲ್ಲಿ 'ಮುಂಬೈ ಫೈಟರ್ಸ್' ಪರ ಅಖಿಲ್ ಕುಮಾರ್ ಸೇರಿದಂತೆ 14 ಬಾಕ್ಸರುಗಳು ನಿರೀಕ್ಷೆ ಮೂಡಿಸಿದ್ದರು.

ಗೇಮ್ಸ್ ಕರ್ಮಕಾಂಡ; ಸುರೇಶ್ ಕಲ್ಮಾಡಿ ಬಂಧನ...
2010ರ ಕಾಮನ್‌ವೆಲ್ತ್ ಹಗರಣವು ವಿಶ್ವ ಮಟ್ಟದಲ್ಲಿ ಇಡೀ ದೇಶವೇ ಮುಖಭಂಗ ಅನುಭವಿಸುವಂತಾಗಿತ್ತು. ಇದರ ವಿರುದ್ಧ ತನಿಖೆಯನ್ನು ಕೈಗೊಂಡಿದ್ದ ಸಿಬಿಐ, ಹಗರಣದ ರೂವಾರಿ ಸುರೇಶ್ ಕಲ್ಮಾಡಿ ಅವರನ್ನು ಎಪ್ರಿಲ್ 25ರಂದು ಬಂಧಿಸಿತ್ತು. ಮಾರನೆಯ ದಿನವೇ ಭಾರತೀಯ ಒಲಿಂಪಿಕ್ ಸಮಿತಿಯು (ಐಒಎ) ಕಾಮನ್‌ವೆಲ್ತ್ ಗೇಮ್ಸ್ ಸಂಘಟನಾ ಸಮಿತಿ ಹಾಗೂ ಭಾರತೀಯ ಒಲಿಂಪಿಕ್ ಆಸೋಸಿಯೇಷನ್ ಅಧ್ಯಕ್ಷರಾಗಿದ್ದ ಕಲ್ಮಾಡಿ ಅವರನ್ನು ವಜಾಗೊಳಿಸಿರುವುದು ಮತ್ತೊಂದು ಬೆಳವಣಿಗೆಗೆ ಕಾರಣವಾಗಿತ್ತು.

PTI


ಇನ್ನೂ ಮುಗಿದಿಲ್ಲ ಹಾಕಿ ಕಚ್ಚಾಟ...
ಹಾಕಿ ಇಂಡಿಯಾ ಮತ್ತು ಇಂಡಿಯನ್ ಹಾಕಿ ಫೇಡರೇಷನ್ ನಡುವಣ ಕಚ್ಚಾಟ ಸದ್ಯಕ್ಕಂತೂ ಮುಗಿಯುವ ಯಾವುದೇ ಲಕ್ಷ್ಮಣಗಳು ಕಾಣಿಸುತ್ತಿಲ್ಲ. ಪರಿಣಾಮವೆಂಬಂತೆ ಹಾಕಿ ರಂಗದಲ್ಲಿ ಭಾರತ ತಂಡವು ಭಾರಿ ಹಿನ್ನಡೆ ಅನುಭವಿಸುವಂತಾಗಿದೆ. ಹಾಕಿ ಇಂಡಿಯಾ ಮತ್ತು ಇಂಡಿಯನ್ ಹಾಕಿ ಫೇಡರೇಷನ್ ನಡುವಣ ಕಿತ್ತಾಟಕ್ಕೆ ಪರಿಹಾರ ಕಂಡು ಹುಡುಕಲು ಭಾರತ ಸರಕಾರವು ಶ್ರಮಿಸಿತ್ತಾದರೂ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದಾಗಿ ಚಾಂಪಿಯನ್ ಲೀಗ್ ಆತಿಥ್ಯ ಹಕ್ಕನ್ನು ಭಾರತ ಕಳೆದುಕೊಳ್ಳುವಂತಾಗಿತ್ತು. ವಿಶ್ವ ಹಾಕಿ ಫೇಡರೇಷನ್ ಭಾರತದಿಂದ ಚಾಂಪಿಯನ್ ಲೀಗ್ ಸ್ಥಳಾಂತರ ಮಾಡಿರುವುದು ಮತ್ತೊಂದು ಕಪ್ಪು ಚುಕ್ಕೆಯಾಗಿತ್ತು.

ವಿಶ್ವ ಹಾಕಿ ಸರಣಿ ಮುಂದೂಡಿಕ
ಹಾಕಿಯ ಮತ್ತೊಂದು ಮಹತ್ವದ ಬೆಳವಣಿಗೆಯೆಂದರೆ ಇದೇ ಮೊದಲ ಬಾರಿಗೆ ಆಯೋಜನೆಯಾಗುತ್ತಿರುವ ವಿಶ್ವ ಹಾಕಿ ಸರಣಿಯ ವೇಳಾಪಟ್ಟಿಯನ್ನು ಮುಂದೂಡಿರುವುದು. ಹಾಕಿ ಇಂಡಿಯಾ ನಡುವಣ ಕಚ್ಚಾಟ ಒಂದೆಡೆಯಾದರೆ ನಿಂಬಸ್ ಜತೆ ಸೇರಿ ವಿಶ್ವ ಹಾಕಿ ಸರಣಿಗೆ ಇಂಡಿಯನ್ ಹಾಕಿ ಫೇಡರೇಷನ್ ರೂಪುರೇಷೆ ನೀಡಿತ್ತು. ಆದರೆ ಆಟಗಾರರ ಲಭ್ಯತೆಯ ಕೊರತೆಯಿಂದಾಗಿ ಡಿಸೆಂಬರ್‌ನಲ್ಲಿ ನಡೆಯಬೇಕಾಗಿದ್ದ ಈ ಬಹುನಿರೀಕ್ಷಿತ ಟೂರ್ನಿಯನ್ನು ಫೆಬ್ರವರಿ ತಿಂಗಳಿಗೆ ಮುಂದೂಡಲಾಯಿತು. ರಾಷ್ಟ್ರೀಯ ಸೇವೆಯನ್ನೇ ಮಹತ್ವವೆಂದು ಪರಿಗಣಿಸಿದ್ದ ಆಟಗಾರರು ಒಲಿಂಪಿಕ್ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದರು. ಇದರಿಂದಾಗಿ ಟೂರ್ನಿಯನ್ನು ಮುಂದೂಡಬೇಕಾಯಿತು.

ಈ ಹಿಂದಿನಂತೆ ಪ್ರಮುಖ ಕೂಟಗಳಲ್ಲಿ ಭಾರತದ ಕೆಟ್ಟ ಪ್ರದರ್ಶನ ಈ ಸಾಲಿನಲ್ಲೂ ಮುಂದುವರಿದಿತ್ತು. ಪ್ರತಿಷ್ಠಿತ ಚಾಂಪಿಯನ್ಸ್ ಚಾಲೆಂಜ್ ಹಾಕಿ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಬೆಲ್ಜಿಯಂ ವಿರುದ್ಧ 4-3ರ ಅಂತರದಿಂದ ಮಣಿದ ಭಾರತ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಅಲ್ಲದೆ ಸುಲ್ತಾನ್ ಅಜ್ಲಾನ್ ಷಾ ಕಪ್‌ನಲ್ಲಿ ಆರನೇ ಸ್ಥಾನಕ್ಕೆ ಕುಸಿದಿತ್ತು.

ಸಂದೀಪ್, ಸರ್ದಾರ್‌ಗೆ ನಿಷೇಧ-ಹಿಂತೆಗೆತ: ಈ ನಡುವೆ ಅಶಿಸ್ತು ತೋರಿದ್ದಾರೆನ್ನುವ ಕಾರಣಕ್ಕಾಗಿ ಹಾಕಿ ಇಂಡಿಯಾ (ಐಎಚ್) ಆಟಗಾರರಾದ ಸಂದೀಪ್ ಸಿಂಗ್ ಮತ್ತು ಸರ್ದಾರ್ ಸಿಂಗ್ ಮೇಲೆ ಎರಡು ವರ್ಷಗಳ ನಿಷೇಧ ವಿಧಿಸಿತ್ತಾದರೂ ಆಮೇಲೆ ಹಿಂಪಡೆದುಕೊಳ್ಳಲಾಗಿತ್ತು.

PTI


ಮತ್ತೆ ಬೇರೆ ಬೇರೆಯಾದ 'ಇಂಡಿಯನ್ ಏಕ್ಸ್‌ಪ್ರೆಸ್'
ಲಂಡನ್ ಒಲಿಂಪಿಕ್ಸ್ ಗುರಿಯಾಗಿಸಿಕೊಂಡಿದ್ದ ಭಾರತದ ಹಿರಿಯ ಡಬಲ್ಸ್ ಪಟುಗಳಾದ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಒಂಬತ್ತು ವರ್ಷಗಳ ದೀರ್ಘ ಅಂತರಾಳದ ನಂತರ ಜತೆಯಾಗಿ ಆಡಲು ನಿರ್ಧರಿಸಿದ್ದರು. ಆದರೆ ಬಹುನಿರೀಕ್ಷಿತ ಕೂಟಕ್ಕೆ ಕೆಲವೇ ತಿಂಗಳುಗಳು ಮಾತ್ರ ಉಳಿದಿರುವಂತೆಯೇ 'ಇಂಡಿಯನ್ ಏಕ್ಸ್‌ಪ್ರೆಸ್' ಖ್ಯಾತಿಯ ಈ ಜೋಡಿ ಮತ್ತೆ ಬೇರೆ ಬೇರೆಯಾಗಿ ಆಡಲು ನಿರ್ಧರಿಸಿರುವುದು ಪ್ರತಿಷ್ಠಿತ ಕೂಟದಲ್ಲಿ ದೇಶದ ಪದಕದ ನಿರೀಕ್ಷೆಗೆ ಭಾರಿ ಹೊಡೆತ ನೀಡುವಂತಾಗಿದೆ.

ಚೆನ್ನೈ ಓಪನ್, ಮಿಯಾಮಿ ಮತ್ತು ಸಿನ್ಸಿನಾಟಿ ಓಪನ್‌ಗಳಲ್ಲಿ ಚಾಂಪಿಯನ್ ಎನಿಸಿಕೊಂಡಿದ್ದ ಮೂರು ಬಾರಿಯ ಗ್ರಾಂಡ್‌ಸ್ಲಾಮ್ ಚಾಂಪಿಯನ್ ಮಹೇಶ್ ಮತ್ತು ಭೂಪತಿ ಜೋಡಿ ಫಿಟ್ನೆಸ್ ಹಾಗೂ ಬಳಲಿಕೆಯನ್ನು ಪರಿಗಣಿಸಿ ಮುಂದಿನ ಆವೃತ್ತಿಯಿಂದ ಯುವ ಆಟಗಾರರೊಂದಿಗೆ ಆಡಲು ನಿರ್ಧರಿಸಿದ್ದರು. ಇದರಂತೆ ಭೂಪತಿ ಅವರು ರೋಹನ್ ಬೋಪಣ್ಣ ಜತೆ ಸೇರಿ ಆಡಲಿದ್ದು, ಪೇಸ್‌ಗೆ ತಿಪ್ಸಾರೆವಿಕ್ ಜತೆಯಾಗಲಿದ್ದಾರೆ.

ಸದ್ಬಾವನಾ ಸಂದೇಶ ಸಾರಿದ ಬೋಪಣ್ಣ-ಖುರೇಷಿ...
ಭಾರತ ಮತ್ತು ಪಾಕಿಸ್ತಾನ ನಡುವಣ ಉತ್ತಮ ಶಾಂತಿ ಸಂದೇಶ ಸಾರಿರುವ ರೋಹನ್ ಬೋಪಣ್ಣ ಮತ್ತು ಹಾಶೀಮ್ ಉಲ್ ಹಕ್ ಖುರೇಷಿ ಈ ಬಾರಿಯೂ ಉತ್ತಮ ಕ್ರೀಡಾ ವರ್ಷವನ್ನು ಪೂರ್ಣಗೊಳಿಸಿದರು. ಆದರೆ ಒಲಿಂಪಿಕ್ ಗುರಿಯಾಗಿರಿಸಿಕೊಂಡಿರುವ ರೋಹನ್ ಬೋಪಣ್ಣ ಮುಂದಿನ ಆವೃತ್ತಿಯಲ್ಲಿ ಖುರೇಷಿ ಅವರಿಗೆ ಗುಡ್‌ಬೈ ಹೇಳಲು ನಿರ್ಧರಿಸಿರುವುದು ಮತ್ತೊಂದು ವಿಭಜನೆಗೆ ಕಾರಣವಾಗಿತ್ತು.

ಆದರೆ ತಮ್ಮೊಳಗೆ ಯಾವುದೇ ಭಿನ್ನಪ್ರಾಯವಿಲ್ಲ ಎಂಬುದನ್ನು ಸಾರಿರುವ ಬೋಪಣ್ಣ ಅವರು ತಮ್ಮ ಆತ್ಮಿಯ ಸ್ನೇಹಿತರಾದ ಖುರೇಷಿ ವಿವಾಹ ಸಮಾರಂಭಕ್ಕೆ ಹಾಜರಾಗಿದ್ದರು. ನವೆಂಬರ್‌ನಲ್ಲಿ ಸಾಗಿದ ಪ್ಯಾರಿಸ್ ಟೂರ್ನಿಯಲ್ಲಿ ಚೊಚ್ಚಲ ಕಿರೀಟ ಮುಡೇಗಿರಿಸಿಕೂಂಡಿದ್ದ ಈ ಜೋಡಿ ಒಟ್ಟು ಮೂರು ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು.

ಸೋಮ್‌ದೇವ್ ಏಳುಬೀಳು...
ಪ್ರಸಕ್ತ ಸಾಲಿನಲ್ಲಿ ಎಟಿಪಿ ರ‌್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ ಸ್ಥಾನಕ್ಕೆ ತಲುಪಿದ್ದ ಭಾರತದ ಭರವಸೆಯ ಸಿಂಗಲ್ಸ್ ಪಟು ಸೋಮದೇವ್ ದೇವರ್ಮನ್ 62ನೇ ಸ್ಥಾನಕ್ಕೆ ಏರಿಕೆ ಕಂಡಿದ್ದರು. ಆದರೆ ಅಸ್ಥಿರ ಪ್ರದರ್ಶನದಿಂದಾಗಿ ತಮ್ಮ ಸ್ಥಾನ ಉಳಿಸಿಕೊಳ್ಳುವಲ್ಲಿ ವಿಫಲರಾದರು. ಇದೀಗ ಲಂಡನ್ ಒಲಿಂಪಿಕ್ಸ್ ಗುರಿಯಾಗಿರಿಸಿಕೊಂಡಿರುವ ಸೋಮ್ ಚೆನ್ನೈ ಓಪನ್‌ನಲ್ಲಿ ಪುಟಿದೇಳುವ ನಿರೀಕ್ಷೆಯಲ್ಲಿದ್ದಾರೆ.

ಸಾನಿಯಾಗೆ ಗಾಯಗಳದ್ದೇ ಸಮಸ್ಯೆ...
ಮತ್ತೊಂದೆಡೆ ಪ್ರಸಕ್ತ ವರ್ಷ ಗಾಯದಿಂದಾಗಿ ಸಾಕಷ್ಟು ಹೆಣಗಾಟ ನಡೆಸಿದ್ದ ಸಾನಿಯಾ ಮಿರ್ಜಾ ಅವರಿಂದ ಶ್ರೇಷ್ಠ ಫಾರ್ಮ್ ಹೊರಬಂದಿರಲಿಲ್ಲ. ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಮೆಂಟ್‌ನ ಮಹಿಳಾ ಸಿಂಗಲ್ಸ್ ಹಾಗೂ ಡಬಲ್ಸ್ ಎರಡೂ ವಿಭಾಗದಲ್ಲೂ ಸಾನಿಯಾ ಮಿರ್ಜಾ ಮೊದಲ ಸುತ್ತಿನಿಂದಲೇ ನಿರ್ಗಮನದ ಹಾದಿ ಹಿಡಿದಿದ್ದರು.

ಫ್ರೆಂಚ್ ಓಪನ್ ಮಹಿಳಾ ಡಬಲ್ಸ್‌ನಲ್ಲಿ ಅಮೋಘ ನಿರ್ವಹಣೆ ನೀಡಿದ್ದ ಸಾನಿಯಾ ಜೋಡಿ 'ರನ್ನರ್ ಅಪ್' ಪ್ರಶಸ್ತಿ ಗೆದ್ದುಕೊಂಡಿದ್ದರು. ಆದರೆ ಸಿಂಗಲ್ಸ್‌ನಲ್ಲಿ ವಿಭಾಗದಲ್ಲಿ ಎರಡನೇ ಸುತ್ತಿನಿಂದ ಹೊರನಡೆದಿದ್ದರು. ವಿಂಬಲ್ಡನ್ ಟೂರ್ನಿಯಲ್ಲೂ ಅಮೋಘ ನಿರ್ವಹಣೆ ಮುಂದುವರಿಸಿದ್ದ ಸಾನಿಯಾ ಜೋಡಿ ಸೆಮಿಫೈನಲ್ ಪ್ರವೇಶ ಮಾಡಿತ್ತಾದರೂ ಸ್ವಲ್ಪದರಲ್ಲೇ ಎಡವಿದ್ದರು. ಇಲ್ಲೂ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದರು.

ಗಾಯದ ಸಮಸ್ಯೆಗೆ ತುತ್ತಾಗಿದ್ದ ಸಾನಿಯಾ ಯುಎಸ್ ಓಪನ್‌ ಮೊದಲ ಸುತ್ತಿನಿಂದಲೇ ನಿರ್ಗಮಿಸಬೇಕಾಯಿತು. ಆದರೆ ಡಬಲ್ಸ್‌ ವಿಭಾಗದಲ್ಲಿ ಮೂರನೇ ಸುತ್ತಿಗೆ ಪ್ರವೇಶ ಮಾಡಿದರು. ಇದೀಗ ಪೂರ್ಣವಾಗಿ ಚೇತರಿಸಿಕೊಂಡಿರುವ ಸಾನಿಯಾ ಮಿರ್ಜಾ ಒಲಿಂಪಿಕ್ಸ್‌ನಲ್ಲಿ ಭಾರತದ ನಿರೀಕ್ಷೆಯಾಗಿದ್ದಾರೆ.

ಡೇವಿಸ್ ಕಪ್ ವೈಫಲ್ಯ...
ಭಾರತ ತಂಡದವರು ಡೇವಿಸ್ ಕಪ್ ಟೆನಿಸ್ ಟೂರ್ನಿಯ ವಿಶ್ವ ಗುಂಪಿನ ಪ್ಲೇ ಆಫ್ ಪಂದ್ಯದಲ್ಲಿ ಸೋಲು ಕಂಡು ಏಷ್ಯಾ/ ಓಸೀನಿಯಾ ವಲಯಕ್ಕೆ ಹಿಂಬಡ್ತಿ ಪಡೆದರು. ಈ ಮೂಲಕ ವಿಶ್ವ ಗುಂಪಿನಿಂದ ಭಾರತ ಹೊರ ಬಿದ್ದಿತು.

PTI


ಎಡವಿದ ಸೈನಾ ನೆಹ್ವಾಲ್...
ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್‌ನಲ್ಲಿ ದೇಶದ ಭರವಸೆಯಾಗಿದ್ದ ಸೈನಾ ನೆಹ್ವಾಲ್ ಪ್ರಸಕ್ತ ಸಾಲಿನಲ್ಲಿ ನಿರೀಕ್ಷೆ ಮುಟ್ಟುವಲ್ಲಿ
ಸಾಧ್ಯವಾಗಿರಲಿಲ್ಲ. 2010ರಲ್ಲಿ ಅಮೋಘ ನಿರ್ವಹಣೆ ನೀಡಿದ್ದ ಸೈನಾ ಮತ್ತದೇ ಯಶಸ್ಸಿನ ಓಟ ಮುಂದುವರಿಸಲು ವಿಫಲರಾದರು. ಸೈನಾ ಮೇಲೆ ಸಾಕಷ್ಟು ನಿರೀಕ್ಷೆಯಿತ್ತಾದರೂ 'ಸ್ವಿಸ್ ಗ್ರಾಂಡ್ ಪ್ರಿಕ್ಸ್' ಗೆಲ್ಲಲು ಮಾತ್ರ ಸಾಧ್ಯವಾಗಿತ್ತು. ಆದರೆ ಮಲೇಷ್ಯಾ, ಇಂಡೋನೇಷ್ಯಾ ಮತ್ತು ವಿಶ್ವ ಸೂಪರ್ ಸಿರೀಸ್‌ನಲ್ಲಿ ಶ್ರೇಷ್ಠ ನಿರ್ವಹಣೆ ನೀಡಿದ ಹೈದರಾಬಾದ್ ಕುವರಿ ರನ್ನರ್-ಅಪ್ ಪ್ರಶಸ್ತಿ ಗೆದ್ದುಕೊಂಡಿದ್ದರು.

ಮತ್ತೊಂದೆಡೆ ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಜ್ವಾಲಾ ಗುತ್ತಾ ಮತ್ತು ಅಶ್ವಿನಿ ಪೊನ್ನಪ್ಪ ಶುಭ ವಾರ್ತೆ ಬಿತ್ತರಿಸಿದ್ದು, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದರು.

'ಸ್ಕರ್ಟ್ ಕಡ್ಡಾಯ' ನಿಯಮ ರದ್ದು...
ಬ್ಯಾಡ್ಮಿಂಟನ್ ಆಟಗಾರ್ತಿಯರು ಕಡ್ಡಾಯವಾಗಿ ಸ್ಕರ್ಟ್ ಧರಿಸಬೇಕು ಎನ್ನುವ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ನೂತನ ನಿಯಮಕ್ಕೆ ಬೆಂಬಲ ವ್ಯಕ್ತವಾಗದಿರುವ ಹಿನ್ನೆಲೆಯಲ್ಲಿ ಪ್ರಸ್ತುತ ನಿಯಮವನ್ನು ಕೊನೆಗೂ ಹಿಂಪಡೆಯಲಾಗಿತ್ತು. ಭಾರತ, ಚೀನಾ, ಇಂಡೋನೇಷ್ಯಾ, ಮಲೇಷಿಯಾ ಸೇರಿದಂತೆ ಹಲವು ರಾಷ್ಟ್ರಗಳ ಆಟಗಾರ್ತಿಯರು ವಿರೋಧ ವ್ಯಕ್ತಪಡಿಸಿದ್ದರಿಂದ ನೂತನ ನಿಯಮ ಜಾರಿಯನ್ನು ಹಿಂಪಡೆಯಲಾಗಿತ್ತು.

PR


ಗಗನ್‌ ನಾರಂಗ್‌ಗೆ 'ರಾಜೀವ್ ಗಾಂಧಿ ಖೇಲ್ ರತ್ನ' ಪ್ರಶಸ್ತಿ
ದೇಶದ ಖ್ಯಾತ ಶೂಟಿಂಗ್ ಪಟು ಗಗನ್ ನಾರಂಗ್ ಅವರಿಗೆ 'ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ' ನೀಡಿ ಗೌರವಿಸಲಾಗಿದೆ. 2010ರಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ ಪಂದ್ಯಾವಳಿಯಲ್ಲಿ ಗಗನ್ ನಾರಂಗ್, ನಾಲ್ಕು ಚಿನ್ನದ ಪದಕಗಳನ್ನು ಪಡೆದಿದ್ದರು. ಅಲ್ಲದೆ ವರ್ಲ್ಡ್ ಚಾಂಪಿಯನ್‌ಶಿಪ್ ಶೂಟಿಂಗ್ ಪಂದ್ಯಾವಳಿಯಲ್ಲಿ ಕಂಚಿನ ಪದಕ ಪಡೆದು ದೇಶಕ್ಕೆ ಕೀರ್ತಿ ತಂದಿದ್ದರು. ಇದೀಗ, ಮುಂದಿನ ವರ್ಷ ನಡೆಯಲಿರುವ ಲಂಡನ್ ಒಲಿಂಪಿಕ್ಸ್‌‌ಗೆ ಆಯ್ಕೆಯಾದ ಮೊದಲ ಭಾರತೀಯ ಶೂಟಿಂಗ್ ಪಟು ಎನ್ನುವ ಗೌರವಕ್ಕೆ ಪಾತ್ರರಾಗಿದ್ದರು.

ಅರ್ಜುನ್ ಪ್ರಶಸ್ತಿ ವಿಜೇತರು: ಜಹೀರ್ ಖಾನ್ (ಕ್ರಿಕೆಟ್), ರಾಹುಲ್ ಬ್ಯಾನರ್ಜಿ(ಬಿಲ್ಲುಗಾರಿಕೆ), ಪ್ರೀಜಾ ಶ್ರೀಧರನ್(ಅಥ್ಲೆಟಿಕ್ಸ್), ವಿಕಾಸ ಗೌಡಾ(ಅಥ್ಲೆಟಿಕ್ಸ್), ಜ್ವಾಲಾ ಗುಟ್ಟಾ(ಬ್ಯಾಡ್ಮಿಂಟನ್) ಸುರಂಜೋಯ್ ಸಿಂಗ್ (ಬಾಕ್ಸಿಂಗ್), ಸುನೀಲ್ ಛೆತ್ರಿ(ಫುಟ್ಬಾಲ್), ರಾಜ್ಪಾಲ್ ಸಿಂಗ್ (ಹಾಕಿ), ವೃದ್ಧಿವಾಲ್ ಖಾಡೇ(ಈಜು), ತೇಜಸ್ವಿನಿ ಸಾವಂತ್ (ಶೂಟಿಂಗ್), ಆಶೀಷ್ ಕುಮಾರ್ (ಜಿಮ್ನಾಸ್ಟಿಕ್), ಸೋಮದೇವ್ ದೇವವರ್ಮನ್(ಟೆನಿಸ್), ರವಿಂದ್ರ ಸಿಂಗ್(ಕುಸ್ತಿ), ರವಿಕುಮಾರ್(ವೇಟ್‌ಲಿಫ್ಟಿಂಗ್) ಸಂಧ್ಯಾರಾಣಿ(ವುಶು), ಪ್ರಸಾಂತಾ ಕರ್ಮಾಕರ್ (ಈಜು), ಸಂಜಯ್ ಕುಮಾರ್ (ವಾಲಿಬಾಲ್), ರಾಕೇಶ್ ಕುಮಾರ್ (ಕಬಡ್ಡಿ) ಮತ್ತು ತೇಜಸ್ವಿನಿ (ಕಬಡ್ಡಿ).

ದ್ರೋಣಾಚಾರ್ಯ ಪ್ರಶಸ್ತಿ: ಇನುಕುರ್ತಿ ವಂಕಟೇಶ್ವರ್ ರಾವ್ (ಬಾಕ್ಸಿಂಗ್) ದೇವೇಂದ್ರ ಕುಮಾರ್ ರಾಥೋರ್(ಜಿಮ್ನಾಸ್ಟಿಕ್),

ಧ್ಯಾನಚಂದ್ ಪ್ರಶಸ್ತಿ: ಶಬ್ಬೀರ್ ಅಲಿ (ಫುಟ್ಬಾಲ್), ಸುಶೀಲ್ ಕೊಹ್ಲಿ(ಈಜು), ರಾಜ್‌ಕುಮಾರ್ (ಕುಸ್ತಿ).

2008ರ ಬೀಜಿಂಗ್ ಒಲಿಂಪಿಕ್ಸ್ ಚಿನ್ನದ ಪದಕದಾರಿ ಅಭಿನವ್ ಬಿಂದ್ರಾ ಅವರಿಗೆ ಭಾರತೀಯ ಸೇನೆಯಿಂದ 'ಲೆಫ್ಟಿನೆಂಟ್ ಕರ್ನಲ್' ಗೌರವ

ಒಟ್ಟಾರೆಯಾಗಿ ಕ್ರಿಕೆಟ್ ಹೊರತುಪಡಿಸಿ ಇತರೆ ಕ್ರೀಡಾ ವಿಭಾಗದಲ್ಲೂ ಭಾರತೀಯರ ಪ್ರದರ್ಶನ ತೃಪ್ತಿದಾಯಕವಾಗಿದ್ದು, 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಗರಿಷ್ಠ ಪದಕಗಳನ್ನು ಗೆದ್ದುಬರಲಿ ಎಂದು ನಾವೆಲ್ಲರು ಹಾರೈಸೋಣ.

ವೆಬ್ದುನಿಯಾವನ್ನು ಓದಿ