ಚೆನ್ನೈ: ಸರ್ವಜ್ಞ ಪ್ರತಿಮೆ ಅನಾವರಣಕ್ಕೆ ಕ್ಷಣಗಣನೆ

ಗುರುವಾರ, 13 ಆಗಸ್ಟ್ 2009 (10:30 IST)
Avinash
WD
ಇಲ್ಲಿನ ಅಯನಾವರಂನಲ್ಲಿರುವ ಜೀವಾ ಉದ್ಯಾನವನ ಕನ್ನಡ ದಾರ್ಶನಿಕ ಸರ್ವಜ್ಞನ ಪ್ರತಿಮೆ ಅನಾವರಣಕ್ಕಾಗಿ ಮರುಜೀವ ಪಡೆದುಕೊಂಡು ಕಂಗೊಳಿಸುತ್ತಿದೆ. ಅಂತೆಯೇ ಸಭಾಕಾರ್ಯಕ್ರಮಕ್ಕಾಗಿ ಇಲ್ಲಿನ ಐಸಿಎಫ್ (ಆರ್‌ಪಿಎಫ್) ಮೈದಾನವೂ ಸಹ ಸಕಲ ರೀತಿಯಲ್ಲಿಯೂ ಅಲಂಕೃತಗೊಂಡು ಸಜ್ಜುಗೊಂಡಿದೆ. ಕನ್ನಡ ಮತ್ತು ತಮಿಳಿನಲ್ಲಿ ಬ್ಯಾನರ್‌ಗಳು ಸ್ವಾಗತ ಫಲಕಗಳು ರಾರಾಜಿಸುತ್ತಿವೆ.

ಸಿಂಗಾರಗೊಳ್ಳುತ್ತಿದೆ ಪಾರ್ಕ್:
ಚೆನ್ನೈನಲ್ಲಿ ಜೀವಾ ಪಾರ್ಕ್ ಪುನರುತ್ಥಾನ, ಸರ್ವಜ್ಞ ಪ್ರತಿಮೆ ಸ್ಥಾಪನೆ ಮುಂತಾದವುಗಳಿಗಾಗಿ ಸುಮಾರು 60 ಲಕ್ಷ ರೂ. ವೆಚ್ಚ ತಗುಲಿದ್ದು, ಕರ್ನಾಟಕ ಸರಕಾರವೇ ಇದನ್ನು ಭರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ನೆಲಮಟ್ಟದಿಂದ ತಲಾ ಒಂದೊಂದು ಅಡಿ ಎತ್ತರದ ಮೂರು ಮೆಟ್ಟಿಲುಗಳು, ಬಳಿಕ 8 ಅಡಿ ಎತ್ತರದ ಪೀಠ, ಅದರ ಮೇಲೆ 9.1 ಅಡಿ ಎತ್ತರದ ಸರ್ವಜ್ಞ ಪ್ರತಿಮೆ ನಿಲ್ಲಿಸಲಾಗಿದೆ.

39x39x39 ಮೀಟರ್ ಸುತ್ತಳತೆಯ ಪಾರ್ಕ್‌ನೊಳಗೆ ಮೆಕ್ಸಿಕನ್ ಗ್ರಾಸ್ (ಹಸಿರು ಹುಲ್ಲು) ಕಂಗೊಳಿಸುತ್ತಿದ್ದು, ಉದ್ಯಾನ ಅಲಂಕಾರ ದೀಪಗಳು, ಕಲ್ಲಿನ ಬೆಂಚುಗಳು, ವಾಕಿಂಗ್ ಪಾತ್, ಫೋಕಸ್ ದೀಪಗಳು ಸಿದ್ಧವಾಗಿವೆ.

ಪುತ್ಥಳಿ ಅನಾವರಣಗೊಳ್ಳಲಿರುವ ಜೀವಾ ಪಾರ್ಕಿನಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಮತ್ತು ಸಾಕಷ್ಟು ವಿಶಾಲವಾದ ಐಸಿಎಫ್ ಮೈದಾನ (ಆರ್‌ಪಿಎಫ್ ಪೆರೇಡ್ ಮೈದಾನ)ದಲ್ಲಿ ಸಭಾ ಕಾರ್ಯಕ್ರಮದ ಏರ್ಪಾಡುಗಳು ಫೈನಲ್ ಟಚ್ ಪಡೆಯುತ್ತಿವೆ. ಭಾರೀ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ಕೂಡ ನಿಯೋಜಿಸಲಾಗಿದೆ. ಕರ್ನಾಟಕದಿಂದ ಆಗಮಿಸುತ್ತಿರುವ ಪತ್ರಕರ್ತರಿಗಾಗಿ ವಿಶೇಷ ಏರ್ಪಾಡುಗಳನ್ನು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಯಡಿಯೂರಪ್ಪರಿಂದ ಪ್ರತಿಮೆ ಅನಾವರಣ
ಗುರುವಾರ ಸಂಜೆ ನಾಲ್ಕು ಗಂಟೆಗೆ ಸಮಾರಂಭ ಆರಂಭವಾಗಲಿದ್ದು, ಕರ್ನಾಟಕ-ತಮಿಳ್ನಾಡು ಬಾಂಧವ್ಯ ವೃದ್ಧಿಯ ಈ ಕಾರ್ಯಕ್ರಮದಲ್ಲಿ ನಿಗದಿಯಂತೆ ಯಡಿಯೂರಪ್ಪ ಅವರು ರಿಮೋಟ್ ಮೂಲಕ ಪ್ರತಿಮೆ ಅನಾವರಣ ಮಾಡಲಿದ್ದು ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕರ್ನಾಟಕದ ಗೃಹಸಚಿವ ವಿ.ಎಸ್. ಆಚಾರ್ಯ ಅವರು ಆಶಯ ಭಾಷಣಮಾಡಲಿದ್ದಾರೆ. ಇದೇವೇಳೆ ಸ್ನೇಹಸಂಘದ ಅಧ್ಯಕ್ಷ ಅಟ್ಟಾವರ ರಾಮದಾಸ್ ಅವರು ಮಾತನಾಡಲಿದ್ದು, ತಮಿಳ್ನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುತ್ತಾರೆ. ತಮಿಳ್ನಾಡು ಮಾಹಿತಿ ಸಚಿವ ಪರಿಧಿ ಇಳಂವಳುದಿ ಅವರು ಸ್ವಾಗತ ಭಾಷಣ ಹಾಗೂ ತಮಿಳು ಅಭಿವೃದ್ಧಿ ಧಾರ್ಮಿಕ ಮತ್ತು ಮಾಹಿತಿ ಇಲಾಖಾ ಕಾರ್ಯದರ್ಶಿ ಕೆ. ಮುತ್ತುಸ್ವಾಮಿ ಅವರಿಂದ ವಂದನಾರ್ಪಣೆ ನಡೆಯಲಿದೆ.

ಕನ್ನಡ ಕಲಾವಿದರು ಸಾಹಿತಿಗಳು
ಈ ಕನ್ನಡ ತಮಿಳು ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಚಿದಾನಂದ ಮೂರ್ತಿ, ಜಿ.ಎಸ್. ಶಿವರುದ್ರಪ್ಪ, ಮುತ್ತೂರು ಕಷ್ಣಮೂರ್ತಿ, ಹಂಪಾನಾಗರಾಜ್ ಹಾಗೂ ಕಲಾವಿದ ವಿಷ್ಣುವರ್ಧನ್, ಭಾರತಿ ವಿಷ್ಣುವರ್ಧನ್, ಕನ್ನಡ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷೆ ಜಯಮಾಲ, ಪಾರ್ವತಮ್ಮ ರಾಜ್ಕುಮಾರ್, ತಾರ, ಬಿ. ಸರೋಜಾದೇವಿ ಸೇರಿದಂತೆ ಸಾಹಿತಿಗಳು, ಚಿಂತಕರು, ಕಲಾವಿದರು ಭಾಗವಹಿಸಲಿದ್ದಾರೆ. ಇದರಲ್ಲದೆ ತಮಿಳ್ನಾಡಿನ ಎಲ್ಲಾ ಸಚಿವರು ಶಾಸಕರು ಕರ್ನಾಟಕದ ಸಚಿವರು ಶಾಸಕರು, ರಾಜಕಾರಣಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕನ್ನಡಿಗರು ಹಾಗೂ ತಮಿಳರು ಸೇರಿದಂತೆ ಒಟ್ಟು ಹತ್ತುಸಾವಿರ ಮಂದಿ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಕನ್ನಡ ಗೀತೆಗಳ ಗಾಯನ
ಸಮಾರಂಭವು ಕನ್ನಡ ಹಾಗೂ ತಮಿಳು ನಾಡಗೀತೆಗಳೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಸಮಾರಂಭದಲ್ಲಿ ಕನ್ನಡದ ಖ್ಯಾತ ಗಾಯಕಿ ಚಿತ್ರ ಅವರಿಂದ ಕನ್ನಡ ಗೀತೆಗಳ ಗಾಯನ ಹಾಗೂ ನೈವೇಲಿಯ ಕನ್ನಡ ಸಂಘದಿಂದ ಕನ್ನಡ ನಾಡಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ.

ಮೈಸೂರಿನಲ್ಲಿ ಪ್ರತಿಮೆ ನಿರ್ಮಾಣ
ನ್ನಡದ ಮಹಾನ್ ಕವಿ ಸರ್ವಜ್ಞನ ಪ್ರತಿಮೆಯನ್ನು ಮೈಸೂರಿನ ಇಲವಾಲದ ಸಮೀಪದಲ್ಲಿ ನಿರ್ಮಿಸಲಾಗಿದೆ. ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿ ಡೀನ್ ಆಗಿದ್ದ ಪ್ರಮೋದಿನಿ ದೇಶಪಾಂಡೆ ದಂಪತಿ ಇದನ್ನು ರೂಪಿಸಿದ್ದಾರೆ. 750 ಕೆ.ದಿ ತೂಕವಿರುವ 9.1 ಅಡಿ ಎತ್ತರದ ಈ ಪುತ್ಥಳಿ ರೂಪುಗೊಂಡು ಏಳು ವರ್ಷ ಕಳೆದಿದೆ. ಬೆಂಗಳೂರಿನ ಕನ್ನಡ ಭವನದಲ್ಲಿ ಧೂಳು ತಿನ್ನುತ್ತಾ ಕುಳಿತಿದ್ದ ಪ್ರತಿಮೆಗಿಂದು ಅನಾವರಣ ಭಾಗ್ಯ. ಈ ದಂಪತಿಗಳು ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಕರ್ನಾಟಕ ಹಾಗೂ ತಮಿಳ್ನಾಡಿನ ಮುಖ್ಯಮಂತ್ರಿಗಳಿಗೆ ಕಂಚಿನ ಚಿಕ್ಕ ಮೂರ್ತಿಗಳನ್ನು ನೀಡಲಿದ್ದಾರೆ.
Avinash
WD

ಭಾಷಣಗಳ ಅನುವಾದ
ಮದ್ರಾಸ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥೆ ತಮಿಳ್ ಸೆಲ್ವಿ ಅವರು ಇಬ್ಬರೂ ಮುಖ್ಯಮಂತ್ರಿಗಳ ಭಾಷಣವನ್ನು ಕನ್ನಡ-ಹಾಗೂ ತಮಿಳಿಗೆ ಅನುವಾದಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಸಭಿಕರಿಗೆ ಸರ್ವಜ್ಞನ ತ್ರಿಪದಿಗಳ ತಮಿಳು ಮತ್ತು ಕನ್ನಡ ಅನುವಾದ ಕೃತಿಯನ್ನು ಹಂಚಲಾಗುವುದು ಎಂದು ಮೂಲಗಳು ತಿಳಿಸಿವೆ.

ವರ್ಷಗಳ ಕಾಲದಿಂದ ಮುಸುಕು ಮುಚ್ಚಿ ಕುಳಿತ್ತಿದ್ದ ದಾರ್ಶನಿಕರಾದ ತಿರುವಳ್ಳುವರ್ ಹಾಗೂ ಸರ್ವಜ್ಞರ ಪ್ರತಿಮೆಗಳಿಗೆ ಬಿಡುಗಡೆಯ ಭಾಗ್ಯ ಲಭಿಸಿದ್ದು, ಉಭಯ ಸರ್ಕಾರಗಳ ಈ ಒಂದು ಪ್ರಮುಖ ಹೆಜ್ಜೆಯು, ಎರಡು ರಾಜ್ಯಗಳೊಳಗಿನ ಬಾಂಧವ್ಯ ವೃದ್ಧಿಗೆ ನಾಂದಿಯಾಗಲಿ, ಸಮಸ್ಯೆಗಳ ಪರಿಹಾರಕ್ಕೆ ಹೆಬ್ಬಾಗಿಲಾಗಲಿ ಎಂಬುದೇ ಎಲ್ಲರ ಆಶಯವಾಗಿದೆ.

'ಕನ್ನಡಿಗರ ತಮಿಳು ಕಣ್ಮಣಿ' ಸ್ಟಾಲಿನ್
1997ರಲ್ಲಿ ಈ ಪ್ರತಿಮೆ ಅನಾವರಣಕ್ಕೆ ಅನುಮತಿ ನೀಡಲಾಗಿತ್ತು. ಆಗ ಮೇಯರ್ ಆಗಿದ್ದು, ಈಗ ತಮಿಳ್ನಾಡಿನ ಉಪಮುಖ್ಯಮಂತ್ರಿಯಾಗಿರುವ ಕುರಣನಿಧಿ ಪುತ್ರ ಸ್ಟಾಲಿನ್ ಅವರಿಗೆ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಕನ್ನಡಿಗರ ತಮಿಳು ಕಣ್ಮಣಿ ಬಿರುದು ನೀಡಿ ಗೌರವಿಸಲಾಗುದು ಎಂದು ಸ್ನೇಹ ಕನ್ನಡ ಸಮಾಜ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಅಟ್ಟಾವರ ರಾಮದಾಸ್ ತಿಳಿಸಿದ್ದಾರೆ.

ಪ್ರತಿಮೆ ಸ್ಥಾಪಿಸಲಾಗಿರುವ ಜೀವಾ ಪಾರ್ಕಿನ ಸನಿಹದಲ್ಲೇ ಕಾರ್ಯಕ್ರಮ ಎಂಬುದು ಈ ಮೊದಲು ನಿಗದಿಯಾಗಿತ್ತು. ಬಳಿಕ ಸ್ಥಳ ಸಾಲದು ಎಂಬ ಕಾರಣಕ್ಕೆ ಇದನ್ನು ಪಕ್ಕದ ಮೈದಾನಕ್ಕೆ ಸ್ಥಳಾಂತರಿಸಲಾಗಿತ್ತು. ಬೆಂಗಳೂರಿನಲ್ಲಿ ನಡೆದ ಅದ್ಧೂರಿಯ ಕಾರ್ಯಕ್ರಮ, ತಮಿಳು ಅತಿಥಿಗಳಿಗೆ ನೀಡಲಾಗಿರುವ ಆದರಾತಿಥ್ಯದಿಂದ ಮನದುಂಬಿರುವ ಕರುಣಾನಿಧಿ ಅವರು ಜೀವಾ ಪಾರ್ಕಿಗೆ ಖುದ್ದಾಗಿ ತೆರಳಿ ಸ್ಥಳ ಪರಿಶೀಲಿಸಿದ ಬಳಿಕ ಸಭಾ ಕಾರ್ಯಕ್ರಮದ ಸ್ಥಳ ಬದಲಾವಣೆಯಾಗಿದೆ.

ಅದೇನೆ ಇರಲಿ, ಈ ಇಬ್ಬರು ದಾರ್ಶನಿಕರ ಬೋಧನೆಗಳು ಎರಡೂ ರಾಜ್ಯಗಳ ನಡುವಿನ ಸೌಹಾರ್ದಕ್ಕೆ ತಳಪಾಯವಾಗಲಿ.

ವೆಬ್ದುನಿಯಾವನ್ನು ಓದಿ