ಸೆನ್ಸೆಕ್ಸ್: 157 ಪಾಯಿಂಟ್‌ಗಳ ಏರಿಕೆ ಕಂಡ ಸೂಚ್ಯಂಕ

ಶುಕ್ರವಾರ, 30 ಮಾರ್ಚ್ 2012 (11:24 IST)
PTI
ಹೂಡಿಕೆದಾರರು ಶೇರುಗಳ ಖರೀದಿಯಲ್ಲಿ ಆಸಕ್ತಿ ತೋರಿದ್ದರಿಂದ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 157 ಪಾಯಿಂಟ್‌ಗಳ ಏರಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಕನಿಷ್ಠ 200 ಪಾಯಿಂಟ್‌ಗಳ ಕುಸಿತ ಕಂಡ ಶೇರುಪೇಟೆ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ 157.08 ಪಾಯಿಂಟ್‌ಗಳ ಚೇತರಿಕೆ ಕಂಡು 17,215.69 ಅಂಕಗಳಿಗೆ ತಲುಪಿದೆ.

ಶೇರುಪೇಟೆಯ ಎಲ್ಲಾ ಕ್ಷೇತ್ರದ ಶೇರುಗಳು ಧನಾತ್ಮಕ ವಹಿವಾಟು ನಡೆಸುತ್ತಿದ್ದು, ಶೇ.1.56 ರಷ್ಟು ಏರಿಕೆ ಕಂಡಿವೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 44.65 ಪಾಯಿಂಟ್‌ಗಳ ಏರಿಕೆ ಕಂಡು 5,223.50 ಅಂಕಗಳಿಗೆ ತಲುಪಿದೆ.

ಏತನ್ಮಧ್ಯೆ, ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಆರಂಭಿಕ ವಹಿವಾಟಿನಲ್ಲಿ ಶೇ.0.87ರಷ್ಟು ಕುಸಿತ ಕಂಡಿದೆ. ಜಪಾನ್‌ನ ನಿಕೈ ಸೂಚ್ಯಂಕ ಕೂಡಾ ಶೇ.0.59 ರಷ್ಟು ಇಳಿಕೆ ಕಂಡಿದೆ.

ವೆಬ್ದುನಿಯಾವನ್ನು ಓದಿ