ಸೆನ್ಸೆಕ್ಸ್: ಭರ್ಜರಿ ಚೇತರಿಕೆ ಕಂಡ ಸಂವೇದಿ ಸೂಚ್ಯಂಕ

ಶುಕ್ರವಾರ, 21 ನವೆಂಬರ್ 2014 (13:27 IST)
ಏಷ್ಯಾ ಮಾರುಕಟ್ಟೆಗಳ ಮಿಶ್ರವಹಿವಾಟಿನ ಮಧ್ಯೆಯೂ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 187 ಪಾಯಿಂಟ್‌ಗಳ ಭರ್ಜರಿ ಚೇತರಿಕೆ ಕಂಡಿದೆ.
 
ವಿದೇಶಿ ಬಂಡವಾಳದ ಒಳಹರಿವು ಮತ್ತು ಚಿಲ್ಲರೆ ಹೂಡಿಕೆದಾರರು ಶೇರುಗಳ ಖರೀದಿಗೆ ಆಸಕ್ತಿ ತೋರಿದ್ದರಿಂದ ಶೇರುಪೇಟೆಯ ಸೂಚ್ಯಂಕ ಚೇತರಿಕೆ ಕಂಡಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 59.75 ಪಾಯಿಂಟ್‌ಗಳ ಏರಿಕೆ ಕಂಡು 8461.65 ಅಂಕಗಳಿಗೆ ತಲುಪಿದೆ.
 
ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 34.71 ಪಾಯಿಂಟ್‌ಗಳ ಏರಿಕೆ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 187.29 ಪಾಯಿಂಟ್‌ಗಳ ಏರಿಕೆ ಕಂಡು 28.254.85 ಅಂಕಗಳಿಗೆ ತಲುಪಿದೆ.
 
ಬ್ಯಾಂಕಿಂಗ್, ಗೃಹೋಪಕರಣ ವಸ್ತುಗಳು, ಹೆಲ್ತ್‌ಕೇರ್, ಉಕ್ಕು, ವಾಹನೋದ್ಯಮ, ತೈಲ ಮತ್ತು ಅನಿಲ ಕ್ಷೇತ್ರಗಳ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.  
 
ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ ಶೇ.0.17 ರಷ್ಟು ಏರಿಕೆ ಕಂಡಿದೆ. ಏತನ್ಮಧ್ಯೆ, ಜಪಾನ್‌ನ ನಿಕೈ ಮಾರುಕಟ್ಟೆ ಸೂಚ್ಯಂಕ ಶೇ.0.78 ರಷ್ಟು ಕುಸಿತ ಕಂಡಿದೆ.
 

ವೆಬ್ದುನಿಯಾವನ್ನು ಓದಿ