ಜಿಎಸ್‌ಟಿ ವಿಶ್ವಾಸ: ಗಗನಕ್ಕೇರಿದ ಶೇರುಪೇಟೆ ಸಂವೇದಿ ಸೂಚ್ಯಂಕ

ಶುಕ್ರವಾರ, 27 ನವೆಂಬರ್ 2015 (18:49 IST)
ಚಳಿಗಾಲದ ಅಧಿವೇಶನದಲ್ಲಿ ಜಿಎಸ್‍ಟಿ ಮಸೂದೆಗೆ ಅಂಗೀಕಾರ ದೊರೆಯಲಿದೆ ಎನ್ನುವ ನಿರೀಕ್ಷೆಯಲ್ಲಿ ಹೂಡಿಕೆದಾರರು ಶೇರುಗಳ ಖರೀದಿಗೆ ಮುಂದಾಗಿದ್ದರಿಂದ ಶೇರುಪೇಟೆ ಸೂಚ್ಯಂಕ 170 ಪಾಯಿಂಟ್‌ಗಳ ಏರಿಕೆ ಕಂಡಿದೆ.
 
ಪ್ರಧಾನಮಂತ್ರಿ ನರೇಂದ್ರ ಮೋದಿ ಜಿಎಸ್‌ಟಿ ಮಸೂದೆಯ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಪಕ್ಷದ ಅದಿನಾಯಕಿ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಚಾಯಿ ಪೇ ಚರ್ಚೆ ನಡೆಸಲು ಆಹ್ವಾನ ನೀಡಿದ ಹಿನ್ನೆಲೆಯಲ್ಲಿ ಶೇರುಪೇಟೆಯ ಹೂಡಿಕೆದಾರರು ಸಂತಸಗೊಂಡಿದ್ದಾರೆ.
 
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮದು ವಹಿವಾಟುದಾರರು ಮತ್ತು ಕೆಲ ಬ್ಯಾಂಕ್‌ಗಳು ಡಾಲರ್‌ಗಳ ಖರೀದಿಗೆ ಆಸಕ್ತಿ ತೋರಿದ್ದರಿಂದ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 19 ಪೈಸೆ ಕುಸಿತವಾಗಿದೆ.
 
ಕಳೆದ ಎರಡು ದಿನಗಳ ವಹಿವಾಟಿನ ಮುಕ್ತಾಯಕ್ಕೆ 352.46 ಪಾಯಿಂಟ್‌ಗಳ ಚೇತರಿಕೆ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ವಹಿವಾಟಿನ ಮುಕ್ತಾಯಕ್ಕೆ ಮತ್ತೆ 169.57 ಪಾಯಿಂಟ್‌ಗಳ ಕುಸಿತ ಕಂಡು 26,128.20 ಅಂಕಗಳಿಗೆ ತಲುಪಿದೆ.  
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ವಹಿವಾಟಿನ ಮುಕ್ತಾಯಕ್ಕೆ 58.90 ಪಾಯಿಂಟ್‌ಗಳ ಏರಿಕೆ ಕಂಡು 7,959.30 ಅಂಕಗಳಿಗೆ ತಲುಪಿದೆ.
 
ಹಿಂಡಾಲ್ಕೋ, ಎಸ್‌ಬಿಐ, ಎಲ್‌ಆಂಡ್‌ಟಿ, ಐಸಿಐಸಿಐ ಬ್ಯಾಂಕ್ ಮತ್ತು ವೇದಾಂತಾ ಲಿಮಿಟೆಡ್ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.

ವೆಬ್ದುನಿಯಾವನ್ನು ಓದಿ