ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟಿನಿಂದ ಸೂಚ್ಯಂಕ ಕುಸಿತ

ಬುಧವಾರ, 10 ಫೆಬ್ರವರಿ 2016 (15:00 IST)
ವಿದೇಶಿ ಬಂಡವಾಳದ ಹೊರಹರಿವು ಹೆಚ್ಚಳ ಮತ್ತು ಚಿಲ್ಲರೆ ಹೂಡಿಕೆದಾರರು ಶೇರುಗಳ ಮಾರಾಟಕ್ಕೆ ಹೆಚ್ಚಿನ ಆಸಕ್ತಿ ತೋರಿದ್ದರಿಂದ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 160 ಪಾಯಿಂಟ್‌ಗಳ ಕುಸಿತ ಕಂಡಿದೆ.
 
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಕುಸಿತವಾಗಿರುವುದು ಕೂಡಾ ಶೇರುಪೇಟೆ ಇಳಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ. 
 
ಕಳೆದ ಎರಡು ದಿನಗಳ ವಹಿವಾಟಿನ ಮುಕ್ತಾಯಕ್ಕೆ 595.99 ಪಾಯಿಂಟ್‌ಗಳ ಕುಸಿತ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 160 ಪಾಯಿಂಟ್‌ಗಳ ಇಳಿಕೆ ಕಂಡು 23,861.21 ಅಂಕಗಳಿಗೆ ತಲುಪಿದೆ. 
 
ಬ್ಯಾಂಕ್, ಹೆಲ್ತ್‌ಕೇರ್, ಉಕ್ಕು, ತೈಲ ಮತ್ತು ಅನಿಲ ಹಾಗೂ ರಿಯಲ್ಟಿ ಕ್ಷೇತ್ರಗಳ ಶೇರುಗಳು ವಹಿವಾಟಿನಲ್ಲಿ ಭಾರಿ ನಷ್ಟ ಅನುಭವಿಸಿವೆ.
 
ಅದರಂತೆ, ರಾಷ್ಟೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 41.90 ಪಾಯಿಂಟ್‌ಗಳ ಇಳಿಕೆ ಕಂಡು 7,256.30 ಅಂಕಗಳಿಗೆ ತಲುಪಿದೆ.
 
ಟಾಟಾ ಮೋಟಾರ್ಸ್, ಐಸಿಐಸಿಐ ಬ್ಯಾಂಕ್, ಡಾ.ರೆಡ್ಡಿ, ಆದಾನಿ ಪೋರ್ಟ್ಸ್, ಒಎನ್‌ಜಿಸಿ, ಗೇಲ್, ಸನ್‌ಫಾರ್ಮಾ, ಲುಪಿನ್ ಶೇರುಗಳು ವಹಿವಾಟಿನಲ್ಲಿ ಕುಸಿತ ಕಂಡಿವೆ.ಜಪಾನ್‌ನ ನಿಕೈ ಸೂಚ್ಯಂಕ ಶೇ.2.40 ರಷ್ಟು ಕುಸಿತ ಕಂಡಿದ್ದರೆ, ಚೀನಾದ ಶಾಂಘೈ ಮತ್ತು ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಶೇರುಪೇಟೆಗೆ ರಜೆ ಘೋಷಿಸಲಾಗಿದೆ. 

ವೆಬ್ದುನಿಯಾವನ್ನು ಓದಿ