ಸಾಮಾನ್ಯ ಬಜೆಟ್ ಮಂಡನೆ: ಭರ್ಜರಿ ಚೇತರಿಕೆ ಕಂಡ ಶೇರು ಸೂಚ್ಯಂಕ

ಶನಿವಾರ, 28 ಫೆಬ್ರವರಿ 2015 (15:23 IST)
ಆರ್ಥಿಕ ಸುಧಾರಣೆ ಬಜೆಟ್ ಮಂಡನೆಯ ವಿಶ್ವಾಸದಿಂದಾಗಿ ಹೂಡಿಕೆದಾರರು ಶೇರುಗಳ ಖರೀದಿಗೆ ಆಸಕ್ತಿ ತೋರಿದ್ದರಿಂದ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 262 ಪಾಯಿಂಟ್‌ಗಳ ಚೇತರಿಕೆ ಕಂಡಿದೆ.
 
ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳ ಮತ್ತು ಚಿಲ್ಲರೆ ಹೂಡಿಕೆದಾರರು ಶೇರುಗಳ ಖರೀದಿಯ ಭರಾಟೆಯಿಂದಾಗಿ ಸೂಚ್ಯಂಕ ಚೇತರಿಕೆ ಕಂಡಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
 
ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 473.47 ಪಾಯಿಂಟ್‌ಗಳ ಏರಿಕೆ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 262.33 ಪಾಯಿಂಟ್‌ಗಳ ಏರಿಕೆ ಕಂಡು 29,482.45 ಅಂಕಗಳಿಗೆ ತಲುಪಿದೆ.
 
ಅದರಂತೆ, ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 74.65 ಪಾಯಿಂಟ್‌ಗಳ ಏರಿಕೆ ಕಂಡು 8919.25 ಅಂಕಗಳಿಗೆ ತಲುಪಿದೆ.
 
ಬಂಡವಾಳ ವಸ್ತುಗಳು, ರಿಯಲ್ಟಿ, ವಿದ್ಯುತ್ ಮತ್ತು ಬ್ಯಾಂಕಿಂಗ್ ಕ್ಷೇತ್ರದ ಶೇರುಗಳು ಸೇರಿದಂತೆ ಎಲ್ಲಾ ಕ್ಷೇತ್ರಗಳ ಶೇರುಗಳು ವಹಿವಾಟಿನಲ್ಲಿ ಶೇ.1.76 ರಷ್ಟು ಚೇತರಿಕೆಯಾಗಿವೆ. 
 
ಶೇರುಪೇಟೆ ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಶನಿವಾರ ಮತ್ತು ರವಿವಾರದಂದು ಸಾಮಾನ್ಯವಾಗಿ ರಜೆ ನೀಡಲಾಗುತ್ತದೆ. ಆದರೆ, ಮೊದಲ ಬಾರಿಗೆ ಕೇಂದ್ರದ ಸಾಮಾನ್ಯ ಬಜೆಟ್‌ನ್ನು ಶನಿವಾರದಂದು ಮಂಡಿಸಿರುವುದು ಹೂಡಿಕೆದಾರರಿಗೆ ಅಚ್ಚರಿ ಮೂಡಿಸಿದೆ.

ವೆಬ್ದುನಿಯಾವನ್ನು ಓದಿ