ಇನ್ಫೋಸಿಸ್ ಲಾಭದಲ್ಲಿ ಹೆಚ್ಚಳ: ಚೇತರಿಕೆ ಕಂಡ ಶೇರುಪೇಟೆ ಸೂಚ್ಯಂಕ

ಸೋಮವಾರ, 12 ಅಕ್ಟೋಬರ್ 2015 (14:07 IST)
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪೆನಿಯಾದ ಇನ್ಫೋಸಿಸ್, ಎರಡನೇ ತ್ರೈಮಾಸಿಕ ಫಲಿತಾಂಶದಲ್ಲಿ ಶೇ.9.75 ರಷ್ಟು ಚೇತರಿಕೆ ಕಂಡಿದ್ದರಿಂದ ಶೇರುಪೇಟೆಯ ಸೂಚ್ಯಂಕ 225 ಪಾಯಿಂಟ್‌‌ಗಳ ಏರಿಕೆ ಕಂಡಿದೆ. 
 
ಏಷ್ಯಾ ಮಾರುಕಟ್ಟೆಗಳ ಚೇತರಿಕೆಯ ವಹಿವಾಟಿನ ಮಧ್ಯೆ ಹೂಡಿಕೆದಾರರು ಶೇರುಗಳ ಖರೀದಿಗೆ ಆಸಕ್ತಿ ತೋರಿದ್ದರಿಂದ ಶೇರುಪೇಟೆ ಸೂಚ್ಯಂಕ ಚೇತರಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
 
ಕಳೆದ ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ 233.70 ಪಾಯಿಂಟ್‌ಗಳ ಚೇತರಿಕೆಯೊಂದಿಗೆ ಅಂತ್ಯವಾಗಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 225.53 ಪಾಯಿಂಟ್‌ಗಳ ಏರಿಕೆ ಕಂಡು 27,305.04 ಅಂಕಗಳಿಗೆ ತಲುಪಿದೆ.
 
ಉಕ್ಕು, ಮಾಹಿತಿ ತಂತ್ರಜ್ಞಾನ, ಎಫ್‌ಎಂಸಿಜಿ, ಫಾರ್ಮಾ ಮತ್ತು ವಾಹನೋದ್ಯಮ ಕ್ಷೇತ್ರದ ಶೇರುಗಳು ವಹಿವಾಟಿನಲ್ಲಿ ಲಾಭದತ್ತ ಸಾಗಿವೆ ಎನ್ನಲಾಗಿದೆ.
 
ಅದರಂತೆ, ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 54.80 ಪಾಯಿಂಟ್‌ಗಳ ಏರಿಕೆ ಕಂಡು 8,244.50 ಅಂಕಗಳಿಗೆ ತಲುಪಿದೆ.
 
ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ.1.29 ರಷ್ಟು ಏರಿಕೆಯಾಗಿದೆ. ಶಾಂಘೈ ಮಾರುಕಟ್ಟೆ ವಹಿವಾಟಿನಲ್ಲಿ ಶೇ.3.43 ರಷ್ಟು ಚೇತರಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.ಜಪಾನ್ ಮಾರುಕಟ್ಟೆಗೆ ಇಂದು ರಜೆ ಘೋಷಿಸಲಾಗಿದೆ.

ವೆಬ್ದುನಿಯಾವನ್ನು ಓದಿ