ಇಂದು ಕಾಂಗ್ರೆಸ್ ಪ್ರಕಟಿಸಲಿದೆ ಮೋದಿ ವಿರುದ್ಧದ ಎದುರಾಳಿಯನ್ನು!

ಮಂಗಳವಾರ, 8 ಏಪ್ರಿಲ್ 2014 (13:00 IST)
ವಾರಣಾಸಿಯಿಂದ ಕಣಕ್ಕಿಳಿಯುತ್ತಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯ ವಿರುದ್ಧ ಯಾರನ್ನು ಕಣಕ್ಕಿಳಿಸುವುದು ಎನ್ನುವ ಸಂದಿಗ್ಧತೆಯಲ್ಲಿದ್ದ ಕಾಂಗ್ರೆಸ್ ಇಂದು ತನ್ನ ಅಭ್ಯರ್ಥಿಯನ್ನು ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
PTI

ಕಾಂಗ್ರೆಸ್ ವಾರಣಾಸಿಯಿಂದ ಪಿಂಡ್ರಾ ಕ್ಷೇತ್ರದ ಶಾಸಕ ಅಜಯ್ ರಾವ್ ಅಥವಾ ಮಾಜಿ ಸಂಸದ ರಾಜೇಶ ಮಿಶ್ರಾರಲ್ಲಿ ಒಬ್ಬರನ್ನು ಆಖಾಡಕ್ಕಿಳಿಸಲಿದೆ ಎಂದು ಮೂಲಗಳು ತಿಳಿಸಿವೆ. ಭೂಮಿಯಾರ್ ಪಂಗಡಕ್ಕೆ ಸೇರಿದ ಅಜಯ್ ರಾವ್ ಕ್ಷೇತ್ರದಲ್ಲಿ ಅಪಾರ ಬೆಂಬಲವನ್ನು ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಮರುದಿನವೇ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಪ್ರಕಟಿಸ ಹೊರಟಿರುವುದು ಕುತೂಹಲಕ್ಕೆ ಕಾರಣವಾಗಿದೆ.

ನರೇಂದ್ರ ಮೋದಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಅನೇಕ ದಿನಗಳಿಂದ ರಣತಂತ್ರವನ್ನು ಹೆಣೆಯುತ್ತಿತ್ತು. ನಮೋಗೆ ಸೋಲುಣಿಸಲು ಅದು ಸಮಾಜವಾದಿ ಮತ್ತು ಬಹುಜನಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಒಮ್ಮತದ ಉಮೇದುವಾರನನ್ನು ಕಣಕ್ಕಿಳಿಸಲು ಶತಪ್ರಯತ್ನ ಮಾಡಿತ್ತು. ಆದರೆ ಕೈಲಾಸ್ ಚೌರಾಸಿಯಾ ಅವರನ್ನು ತಮ್ಮ ಅಭ್ಯರ್ಥಿಯೆಂದು ಘೋಷಿಸುವ ಮೂಲಕ ಸಮಾಜವಾದಿ ಪಕ್ಷ ಕಾಂಗ್ರೆಸ್ ಬಯಕೆಗೆ ತಣ್ಣಿರೆರೆಚಿತು.

ಆಪ್ ನಾಯಕ ಕೇಜ್ರಿವಾಲ್ ಕೂಡ ಈ ಕ್ಷೇತ್ರದಿಂದ ಮೋದಿ ವಿರುದ್ಧ ಕಣಕ್ಕಿಳಿದಿದ್ದು ಜಿದ್ದಾಜಿದ್ದಿನ ಹೋರಾಟವನ್ನು ನಿರೀಕ್ಷಿಸಲಾಗಿದೆ.

ವೆಬ್ದುನಿಯಾವನ್ನು ಓದಿ