ಉಪಪ್ರಧಾನಿ ಸ್ಥಾನದ ಆಕಾಂಕ್ಷಿಯಲ್ಲ: ಅರುಣ್ ಜೇಟ್ಲಿ ಸ್ಪಷ್ಟನೆ

ಶನಿವಾರ, 22 ಮಾರ್ಚ್ 2014 (16:04 IST)
PTI
ಕೇಂದ್ರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದರೆ ಮೋದಿ ಪ್ರಧಾನಿ ಹಾಗು ಅರುಣ್ ಜೇಟ್ಲಿ ಉಪ ಪ್ರಧಾನಿ ಎಂದು ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅರುಣ್ ಜೇಟ್ಲಿ ತಾನು ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ ಎಂದು ಹೇಳಿದ್ದಾರೆ.

ಶುಕ್ರವಾರ ಅಮೃತಸರದ ಬಿಜೆಪಿ ಅಭ್ಯರ್ಥಿ ಅರುಣ್ ಜೇಟ್ಲಿ ಪಂಜಾಬ್‌ನಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದಾಗ ಎನ್ ಡಿ ಎ ಮೈತ್ರಿಕೂಟದ ಸಹಪಕ್ಷವಾದ ಶಿರೋಮಣಿ ಅಕಾಲಿದಳದ ನಾಯಕ ಪ್ರಕಾಶ್ ಸಿಂಗ್ ಬಾದಲ್ ಜ್ಲೇಟ್ಲಿ ಉಪಪ್ರಧಾನಿಯಾಗಲಿದ್ದಾರೆ ಎಂದು ಹೇಳಿದ್ದರು.

ಬಾದಲ್ ಅವರ ಹೇಳಿಕೆ ಬಿಜೆಪಿ ಪಕ್ಷದಲ್ಲಿ ಸಂಚಲನವನ್ನುಂಟು ಮಾಡಿತ್ತು. ಈ ಬಗ್ಗೆ ಶನಿವಾರ ಪ್ರತಿಕ್ರಿಯಿಸಿದ ಜೇಟ್ಲಿ ಅಕಾಲಿ ದಳ ಮತ್ತು ಬಿಜೆಪಿ ನಡುವಿನ ಸಂಬಂಧ ಚೆನ್ನಾಗಿಯೇ ಇದೆ. ನಾನು ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ ಎಂದು ಹೇಳಿದ್ದಾರೆ.

ಆದಾಗ್ಯೂ, ಬಾದಲ್ ಅವರು ತಮ್ಮ ವೈಯಕ್ತಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರಷ್ಟೇ. ಬಾದಲ್ ಹಿರಿಯ ನಾಯಕರು. ಅವರು ಯಾವುದೇ ತೀರ್ಮಾನಗಳನ್ನು ತೆಗೆದು ಕೊಂಡಿಲ್ಲ ಎಂದು ಬಿಜೆಪಿ ವಕ್ತಾರ ಮುಖ್ತಾರ್ ಅಬ್ಬಾಸ್ ನಖ್ವೀ ಹೇಳಿದ್ದಾರೆ.

ಬಾದಲ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಶಿವಸೇನಾ ವಕ್ತಾರ ಸಂಜಯ್ ರೌತ್, ಮೊದಲು ಮೋದಿ ಪ್ರಧಾನಿಯಾಗಲಿ, ಆಮೇಲೆ ನಾವು ಉಪ ಪ್ರಧಾನಿಯ ಬಗ್ಗೆ ಮಾತನಾಡೋಣ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ