ಚುನಾವಣಾ ಆಯೋಗದ ರಾಷ್ಟ್ರೀಯ ಐಕಾನ್ ಆದ ಅಮೀರ್ ಖಾನ್

ಬುಧವಾರ, 2 ಏಪ್ರಿಲ್ 2014 (16:14 IST)
ಮತದಾನ ಆರಂಭವಾಗಲು ಒಂದು ವಾರಕ್ಕಿಂತ ಕಡಿಮೆ ಅವಧಿ ಬಾಕಿ ಇದ್ದು, ಚುನಾವಣಾ ಆಯೋಗ ತನ್ನ ರಾಷ್ಟ್ರೀಯ ಐಕಾನ್ ಆಗಿ ಚಲನಚಿತ್ರ ನಟ ಅಮೀರ್ ಖಾನ್ ಜೊತೆ ಮಹತ್ವದ ಪಾಲುದಾರಿಕೆಯನ್ನು ಮಾಡಿಕೊಂಡಿದೆ.
PTI

"ನೈತಿಕವಾಗಿ" ಮತ ಚಲಾಯಿಸುವಂತೆ ಅಮೀರ್‌ಖಾನ್ ಜನರನ್ನು ಒತ್ತಾಯಿಸುತ್ತಿರುವುದನ್ನು ತೋರಿಸುವ ಆಡಿಯೋ ಮತ್ತು ವೀಡಿಯೊಗಳನ್ನು ಆಯೋಗ ರೆಕಾರ್ಡ್ ಮಾಡಿಕೊಂಡಿದೆ.

ಪ್ರಸ್ತುತ ಚುನಾವಣೆಗೆ ಸಂಬಂಧಿಸಿದಂತೆ ನಟನ ಜತೆಗಿನ ಸಂಧಾನಕ್ಕೆ ವಿಳಂಬವಾಗಲು ಕಾರಣವಾದ ಕೆಲವು ಚಿಕ್ಕ ಸಮಸ್ಯೆಗಳನ್ನು ಆಯೋಗ ಪರಿಹರಿಸಿಕೊಂಡಿದೆ.

ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ, ಕ್ರಿಕೆಟಿಗ ಧೋನಿ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತು ಬಾಕ್ಸರ್ ಮೇರಿ ಕೋಮ್ ಕೂಡ ಚುನಾವಣಾ ಆಯೋಗದ ಐಕಾನ್‌ಗಳಾಗಿದ್ದು, ಅವರ ಸಾಲಿಗೆ ಅಮೀರ್ ಸೇರ್ಪಡೆಯಾಗಿದ್ದಾರೆ.

ತನ್ನ ಅಧಿಕೃತ ಪಾಲುದಾರ ದೂರದರ್ಶನ ತಂಡದ ಜತೆ ಮುಂಬೈನಲ್ಲಿ 1 ನಿಮಿಷ 22 ಸೆಕೆಂಡುಗಳ ವೀಡಿಯೊ ಸ್ಪಾಟ್ ರೆಕಾರ್ಡ್ ಮಾಡಿಕೊಂಡಿರುವ ಆಯೋಗ ಈಗಾಗಲೇ ತನ್ನ ವೆಬ್‌ಸೈಟ್‌ನಲ್ಲಿ ಅದನ್ನು ಅಪ್ಲೋಡ್ ಮಾಡಿದೆ. ಅಲ್ಲದೇ ಪ್ರಮುಖ ಸುದ್ದಿ ವಾಹಿನಿಗಳಿಗೆ ಮತ್ತು ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಅದನ್ನು ರವಾನಿಸಿದೆ.

ಜೊತೆಗೆ, ಅಮೀರ್ ವೃತ್ತಿಪರ ಸಂಸ್ಥೆಗಳು ಆಯೋಗಕ್ಕಾಗಿ ತಯಾರಿಸಿರುವ ಆಡಿಯೋಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ. ಈ ಆಡಿಯೋ ಪ್ರತಿಯೊಂದು ಮತ ಹೇಗೆ ಬದಲಾವಣೆಯನ್ನು ತರುತ್ತದೆ ಎಂದು ಜನತೆಗೆ ನೆನಪಿಸುವ ಒಂದು ಜಿಂಗಲ್‌ನ್ನು ಒಳಗೊಂಡಿದೆ. ಅಲ್ಲದೇ ಅಮೀರ್ "ನಿಲ್ಲಬೇಡಿ, ತಪ್ಪಿಸಿಕೊಳ್ಳ ಬೇಡಿ, ಅಗತ್ಯವಾಗಿ ಮತ ನೀಡಿ" ಎಂದು ಜನರಲ್ಲಿ ವಿನಂತಿಸಿ ಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ