ಜೀವನದಲ್ಲಿ ಪಕ್ಷ ವಿರೋಧಿ ಕೆಲಸ ಮಾಡಿಲ್ಲ ಸಿದ್ದರಾಮಯ್ಯ

ಗುರುವಾರ, 27 ಮಾರ್ಚ್ 2014 (13:45 IST)
PR
ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಅವರ ಸೋತಿದಕ್ಕೆ ನಾನು ಹೊಣೆಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಈ ಸಂಬಂಧ ಮಾಡಿರುವ ಆರೋಪಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು ಈ ವಿಷಯ ತಿಳಿಸಿದ್ದಾರೆ.

ನಾನು ನನ್ನ ಜೀವನದಲ್ಲಿ ಯಾವ ಸಂದರ್ಭದಲ್ಲೂ ಪಕ್ಷ ವಿರೋಧಿ ಕೆಲಸ ಮಾಡಿಲ್ಲ. ಸ್ವಪಕ್ಷೀಯರನ್ನು ಸೋಲಿಸುವ ಪ್ರಯತ್ನ ನಡೆಸಿಲ್ಲ. ಹೀಗಾಗಿ ದೇವೇಗೌಡರು ನನ್ನನ್ನು ಇದಕ್ಕೆ ಹೊಣೆಗಾರನನ್ನಾಗಿ ಮಾಡಿ ಆರೋಪಿಸಿರುವುದು ಸರಿಯಲ್ಲ. ನಮ್ಮ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ವಿವೇಚನೆ ಇದೆ: ಅದೇ ರೀತಿ ದೇವೇಗೌಡರು ಟೀಕೆ ಮಾಡುವ ಮಾತಿನ ಮೇಲೆ ನಿಯಂತ್ರಣವಿರಲಿ ಎಂದು ಸಲಹೆ ನೀಡಿದ್ದಾರೆ. ನಾನು ಯಾವತ್ತೂ ವಿವೇಚನೆ ಇಲ್ಲದೇ ಮಾತನಾಡುವುದಿಲ್ಲ. ಅಳುವ ಗಂಡಸರನ್ನು ನಂಬಬಾರದು, ನಗುವ ಹೆಂಗಸರನ್ನು ನಂಬಬಾರದು ಎಂಬ ಗಾದೆ ಮಾತನ್ನು ಭಾಷಣ ಮಾಡುವಾಗ ಸಾಂದರ್ಭಿಕವಾಗಿ ಬಳಸಿದ್ದೇನೆ. ಅದಕ್ಕೆ ದೇವೇಗೌಡರು ಸಿಟ್ಟಾಗುವ ಅಗತ್ಯವಿರಲಿಲ್ಲ. ಅಷ್ಟಕ್ಕೂ ಚುನಾವಣೆ ಸಂದರ್ಭದಲ್ಲಿ ಯಾಕೆ ಅಳಬೇಕು? ಎಂದು ಪ್ರಶ್ನಿಸಿದ್ದಾರೆ.


ಹತಾಶೆ: ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ಸರ್ಕಾರ ಹಫ್ತಾ ವಸೂಲಿ ಮಾಡುತ್ತಿದೆ ಎಂದು ಹೇಳಿಕೆ ನೀಡಿರುವುದು ಬೇಜವಾಬ್ದಾರಿತನತದ ಪರಮಾವಧಿ. ಇಂಥ ಮಾತುಗಳು ಅವರಿಗೆ ಶೋಭೆ ತರುವುದಿಲ್ಲ. ಅವರು ಮುಖ್ಯಮಂತ್ರಿಯಾಗಿದ್ದಾಗ ಸಾವಿರಾರು ಕೋಟಿ ಹಣ ಮಾಡಿದರು ಎಂದು ನಾನೂ ಹೇಳಬಹುದು. ಆದರೆ ಅದು ಸರಿಯಲ್ಲ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಸೋಲಿನ ಭೀತಿ ಎದುರಿಸುತ್ತಿರುವ ಅವರು ಹತಾಶೆಯಿಂದ ಇಂಥ ಹೇಳಿಕೆ ನೀಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ವೆಬ್ದುನಿಯಾವನ್ನು ಓದಿ