ಲೋಕಸಭೆ ಚುನಾವಣೆ: ಆರು ಹಂತಗಳಲ್ಲಿ ಮತದಾನ ನಡೆಸಲು ಚುನಾವಣೆ ಆಯೋಗ ಸಿದ್ದತೆ

ಮಂಗಳವಾರ, 14 ಜನವರಿ 2014 (11:14 IST)
PTI
ಐದು ವರ್ಷಗಳ ಹಿಂದೆ ಐದು ಹಂತಗಳಲ್ಲಿ ಸಾರ್ವತ್ರಿಕ ಲೋಕಸಭೆ ಚುನಾವಣೆ ನಡೆಸಿದ್ದ ಕೇಂದ್ರೀಯ ಚುನಾವಣಾ ಆಯೋಗ ಈ ಬಾರಿ ಆರು ಹಂತಗಳಲ್ಲಿ ಮತದಾನ ನಡೆಸುವ ಸುಳಿವು ನೀಡಿದೆ.

ಆರು ಹಂತದಲ್ಲಿ ಚುನಾವಣೆ ನಡೆಸುವ ಚಿಂತನೆ ಇದ್ದು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳೊಂದಿಗಿನ ಸಮಾಲೋಚನೆ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಚುನಾವಣಾ ಆಯುಕ್ತ ಎಚ್‌.ಎಸ್‌. ಬ್ರಹ್ಮ ಸೋಮವಾರ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

ಫೆಬ್ರವರಿ ಅಂತ್ಯ ಅಥವಾ ಮಾರ್ಚ್‌ ತಿಂಗಳ ಆರಂಭದಲ್ಲಿ ಚುನಾವಣೆ ದಿನಾಂಕ ಘೋಷಿಸಲಾಗುವುದು. ಸಾರ್ವತ್ರಿಕ ಚುನಾವಣೆಗಾಗಿ ಈಗಾಗಲೇ ಆಯೋಗ ಪ್ರಾಥಮಿಕ ಹಂತದ ಸಿದ್ಧತೆಗಳನ್ನು ಆರಂಭಿಸಿದೆ. ಎಲ್ಲ ಪ್ರಕ್ರಿಯೆಗಳು ಸಾಂಗವಾಗಿ ನಡೆಯುತ್ತಿವೆ ಎಂದು ತಿಳಿಸಿದ್ದಾರೆ.

ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನಿಷೇಧಿಸಲೇಬೇಕು ಎಂದು ಹೇಳಿರುವ ಅವರು, 'ಅಭ್ಯರ್ಥಿಗಳನ್ನು ವಾಪಸ್‌ ಕರೆಸಿಕೊಳ್ಳುವ' ಹಕ್ಕು ಕೊಡುವುದಕ್ಕೆ ದೇಶ ಈಗ ಸಿದ್ಧವಾಗಿಲ್ಲ ಎಂದು ನುಡಿದಿದ್ದಾರೆ.

ವೆಬ್ದುನಿಯಾವನ್ನು ಓದಿ