ಮೈಸೂರಿನ ಹಳೇ ಹುಲಿಯನ್ನು ಸೋಲಿಸಿದ ಹೊಸ ಸಿಂಹ

ಶುಕ್ರವಾರ, 16 ಮೇ 2014 (15:46 IST)
ಮೈಸೂರು:  ಮೈಸೂರು -ಕೊಡಗು ಕ್ಷೇತ್ರದಲ್ಲಿ ಹಳೇ ಹುಲಿ ಮತ್ತು ಬಿಸಿರಕ್ತದ ಸಿಂಹದ ನಡುವೆ ಹೋರಾಟವೆಂದು ಬಣ್ಣಿಸಲಾಗಿದ್ದ ಚುನಾವಣೆಯಲ್ಲಿ ಕೊನೆಗೂ ಸಿಂಹ ಗೆದ್ದಿದೆ. ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪ್ರತಾಪ್ ಸಿಂಹ ಅವರು ಕಾಂಗ್ರೆಸ್ ನ ಹಳೆ ಹುಲಿ ವಿಶ್ವನಾಥ್ ಅವರನ್ನು 9 ಸಾವಿರ ಮತಗಳ ಅಂತರದಿಂದ ಸೋಲಿಸಿ, ಮೊದಲ ಬಾರಿಗೆ ಸಂಸತ್ತಿಗೆ ಪ್ರವೇಶಿಸಿದ್ದಾರೆ.

ಮೋದಿಯವರ ಪ್ರಚಂಡ ಅಲೆಗೆ ಕಾಂಗ್ರೆಸ್‌ನ ಅನೇಕ ಅಭ್ಯರ್ಥಿಗಳು ನೆಲಕಚ್ಚಿದ್ದು, ಅವರ ಪೈಕಿ ವಿಶ್ವನಾಥ್ ಕೂಡ ಒಬ್ಬರು.  ಮೈಸೂರಿನಲ್ಲಿ ಕೂಡ ನರೇಂದ್ರ ಮೋದಿ ಅಲೆ ಬೀಸಿರುವುದು ಈ ಫಲಿತಾಂಶದಿಂದ ವ್ಯಕ್ತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿಯೇ ಕಾಂಗ್ರೆಸ್ ಪರಾಭವಗೊಂಡಿರುವುದರಿಂದ ಸಿಎಂ ತಲೆತಗ್ಗಿಸುವಂತಾಗಿದೆ.

ಸಿದ್ದರಾಮಯ್ಯ ಅವರು ವಿಶ್ವನಾಥ್ ಪರ ಸಾಕಷ್ಟು ಪ್ರಚಾರವನ್ನೂ ನಡೆಸಿದ್ದರು.ಸ್ವತಃ ನರೇಂದ್ರ ಮೋದಿ ಅವರೇ ಮೈಸೂರಿಗೆ ಆಗಮಿಸಿ ಪ್ರತಾಪ್ ಸಿಂಹ ಅವರ ಪರವಾಗಿ ಪ್ರಚಾರ ನಡೆಸಿ ಅವರನ್ನು ಗೆಲ್ಲಿಸಿಕೊಡಬೇಕು ಎಂದು ಬಹಿರಂಗಸಭೆಯಲ್ಲಿ ಮತದಾರರನ್ನು ಕೋರಿದ್ದರು. ಮೋದಿ ಅಲೆಯಲ್ಲಿ ಕಾಂಗ್ರೆಸ್ ಪಕ್ಷ  ಕೊಚ್ಚಿಹೋಗಿರುವುದಂತೂ ಖಂಡಿತ. 

 
 
 
 

ವೆಬ್ದುನಿಯಾವನ್ನು ಓದಿ